ಶಿವಮೊಗ್ಗ: ಕೊರೋನಾ ಲಾಕ್ಡೌನ್ ನಿಂದಾಗಿ ಎಲ್ಲಾ ಕ್ಷೇತ್ರಗಳಲ್ಲೂ ಹಿನ್ನಡೆ ಆಗಿದ್ದರೆ, ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಮಾತ್ರ ಭರ್ಜರಿಯಾಗಿ ಹಾಲು ಹರಿದು ಬರತೊಡಗಿದೆ.
ಲಾಕ್ಡೌನ್ ನಂತರದ ಅವಧಿಯಲ್ಲಿ ಬರೋಬ್ಬರಿ ಒಂದೂಕಾಲು ಲಕ್ಷ ಲೀಟರ್ ಹಾಲಿನ ಹೆಚ್ಚಳ ಆಗಿರುವುದು ಕಂಡುಬಂದಿದೆ. ಕೊರೋನಾ ಲಾಕ್ಡೌನ್ ಘೋಷಣೆ ಮಾಡುವ ಮುನ್ನ ಶಿಮುಲ್( ಶಿವಮೊಗ್ಗ ಹಾಲು ಒಕ್ಕೂಟ)ಗೆ 4.75 ಲಕ್ಷ ಲೀಟರ್ ಹಾಲು ಬರುತ್ತಿತ್ತು. ಈಗ ಬರೋಬ್ಬರಿ 6.43 ಲಕ್ಷ ಲೀಟರ್ ಹಾಲಿನ ಸರಬರಾಜು ಆಗುತ್ತಿದೆ.
ಲಾಕ್ ಡೌನ್ ಬಳಿಕ ಸುಮಾರು ಒಂದೂಕಾಲು ಲಕ್ಷ ಲೀಟರ್ ಅಧಿಕ ಹಾಲು ಶಿಮುಲ್ಗೆ ಬರುತ್ತಿದೆ. ಇದು ಒಂದು ರೀತಿಯಲ್ಲಿ ಸಂತಸದ ಸಂಗತಿಯಾದರೆ, ಮತ್ತೊಂದೆಡೆ ಹಾಲು ಒಕ್ಕೂಟಗಳು ಖರೀದಿ ಮಾಡಿದ ಹಾಲನ್ನು ಪೂರ್ಣ ಮಾರಾಟ ಮಾಡಲಾರದೇ ಸಂಕಟ ಪಡುವ ಸ್ಥಿತಿಯೂ ಇದೆ. ಹಾಲಿ ಬರುತ್ತಿರುವ ಹಾಲಿನಲ್ಲಿ 2.30 ಲಕ್ಷ ಲೀಟರ್ ಹಾಲು ಪುನಃ ಗ್ರಾಹಕರಿಗೆ ಸರಬರಾಜು ಆಗುತ್ತಿದೆ. ಇನ್ನು ಒಂದು ಲಕ್ಷ ಲೀಟರ್ ಹಾಲನ್ನು ಇತರೆ ಡೈರಿಗಳಿಗೆ ಸರಬರಾಜು ಮಾಡಲಾಗುತ್ತಿದೆ.
3.10 ಲಕ್ಷ ಲೀಟರ್ ಹಾಲನ್ನು ಪೌಡರ್ ಆಗಿ ಪರಿವರ್ತಿಸಲಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾಲಿನ ಪೌಡರ್ ಉತ್ಪಾದನೆ ಆಗುತ್ತಿದ್ದರೂ ಮಾರುಕಟ್ಟೆಯಲ್ಲಿ ಈ ಪ್ರಮಾಣದ ಬೇಡಿಕೆ ಇಲ್ಲವಾಗಿದೆ. ಇದು ಹಾಲು ಒಕ್ಕೂಟಗಳಿಗೆ ತಲೆಬಿಸಿ ಉಂಟುಮಾಡಿದೆ.