ಮೈಸೂರು: ಮಹಾಮಾರಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ ಮೈಸೂರಿನಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಕೇವಲ ಮನುಷ್ಯ ಮಾತ್ರವಲ್ಲ, ಆತನನ್ನು ಅವಲಂಭಿಸಿದ್ದ ಪ್ರಾಣಿ, ಪಶು, ಪಕ್ಷಿಗಳೂ ಸಂಕಷ್ಟಕ್ಕೆ ಸಿಲುಕಿವೆ. ಅವುಗಳಿಗೆ ನಿತ್ಯವೂ ಮನುಷ್ಯರಿಂದ ಸಿಗುತ್ತಿದ್ದ ಆಹಾರಕ್ಕೆ ಹೊಡೆತ ಬಿದ್ದಿದೆ. ಇದರಿಂದಾಗಿ ಮೂಕ ಪ್ರಾಣಿಗಳು ಆಹಾರಕ್ಕಾಗಿ ಅಲೆದಾಡುತ್ತಿವೆ. ಹಸಿವು ತಾಳಲಾದೆ ಒದ್ದಾಡುತ್ತಿವೆ. ಇವುಗಳ ವೇದನೆ ಅರಿತ ಕೆಲವು ಸಂಘ, ಸಂಸ್ಥೆಯವರು ಈ ಮೂಕ ಪ್ರಾಣಿಗಳಿಗೆ ಇದೀಗ ಆಹಾರವನ್ನು ನೀಡುವ ಮೂಲಕ ಕೊರೋನಾ ಹೋರಾಟದಲ್ಲಿ ಅವುಗಳನ್ನು ಉಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ನಮ್ಮ ಮೈಸೂರು ಫೌಂಡೇಶನ್ನವರು ಭಾನುವಾರ ನಗರದ ಅರಮನೆ, ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ, ಸೇರಿದಂತೆ ವಾಹನಗಳಲ್ಲಿ ಮೈಸೂರು ನಗರಾದ್ಯಾಂತ ಸಂಚರಿಸಿ, ಬೀದಿ ನಾಯಿಗಳು, ಹಸು, ಕಾಗೆ ಮುಂತಾದವುಗಳಿಗೆ ಆಹಾರ ವಿತರಿಸಿದರು. ಪ್ರವಾಸೋದ್ಯಮವನ್ನೇ ನಂಬಿ, ಸಂಕಷ್ಟಗೀಡಾಗಿರುವ ಟಾಂಗಾವಾಲಗಳ ಕುದುರೆಗಳಿಗೂ ಆಹಾರ ವಿತರಿಸಿದರು.
ನಗರದ ಅರಮನೆಯಲ್ಲಿ ನೂರಾರು ಪಾರಿವಾಳಗಳು ವಾಸಿಸುತ್ತಿದ್ದು, ಅವುಗಳಿಗೂ ಕೂಡ ಆಹಾರವನ್ನು ಹಾಕಿದರು. ಬೀಡಾಡಿ ದನಗಳು, ಹಸುಗಳಿಗೆ ಹಸಿರು ಮೇವು ನೀಡಿದರು.