ಹೊಸದಿಗಂತ ಆನ್ ಲೈನ್ ಡೆಸ್ಕ್:
ಆರ್ಜೆಡಿ ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಟ್ಟಿದ್ದು, ಆರೋಗ್ಯದಲ್ಲಿ ಇನ್ನಷ್ಟು ಸಮಸ್ಯೆ ಕಾಣಿಸಿಕೊಂಡಿದ್ದು, ರಾಂಚಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಸಂಜೆ ಅವರನ್ನು ರಿಮ್ಸ್ ಆಸ್ಪತ್ರೆಗೆ ಕರೆತರಲಾಗಿದೆ. ಅವರ ಮಗಳು ಮಿಸಾ ಭಾರತಿ ಈಗಾಗಲೇ ಅಸ್ಪತ್ರೆ ತಲುಪಿದ್ದಾರೆ. ಅವರ ಕಿರಿಯ ಮಗ ತೇಜಶ್ವಿ ಯಾದವ್ ಮತ್ತು ಪತ್ನಿ ರಾಬ್ರಿ ದೇವಿ ಪಾಟ್ನಾದಿಂದ ಚಾರ್ಟರ್ಡ್ ವಿಮಾನದಲ್ಲಿ ರಾಂಚಿಗೆ ಬಂದಿಳಿದಿದ್ದಾರೆ.
‘ಲಾಲು ಪ್ರಸಾದ್ ಯಾದವ್ ಆರೋಗ್ಯ ಸ್ಥಿರವಾಗಿದೆ. ಅವರ ಶ್ವಾಸಕೋಶದಲ್ಲಿ ಸೋಂಕು ಇದೆ. ಚಿಕಿತ್ಸೆ ನಡೆಯುತ್ತಿದೆ. ಇದು ಒಂದು ರೀತಿಯ ನ್ಯುಮೋನಿಯಾ ಕಾಣಿಸಿಕೊಂಡಿದೆ. ನಾವು ಏಮ್ಸ್ನ ಶ್ವಾಸಕೋಶ ವಿಭಾಗದ ಮುಖ್ಯಸ್ಥರೊಂದಿಗೆ ಸಮಾಲೋಚಿಸಿದ್ದೇವೆ. ಆಂಟಿಜೆನ್ ಪರೀಕ್ಷೆಯಲ್ಲಿ ಕರೊನಾ ನೆಗೆಟಿವ್ ವರದಿ ಬಂದಿದೆ. ಆರ್ಟಿಪಿಸಿಆರ್ ಪರೀಕ್ಷೆಯ ವರದಿ ನಾಳೆ ಬರಲಿದೆ’ಎಂದು ರಿಮ್ಸ್ ನಿರ್ದೇಶಕ ಡಾ.ಕಮೇಶ್ವರ ಪ್ರಸಾದ್ ಹೇಳಿದ್ದಾರೆ.