ಮಂಡ್ಯ: ಕೋವಿಡ್-19 ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿರೋಧ ಪಕ್ಷದವರಿಗೆ ಲೆಕ್ಕ ಕೊಟ್ಟಿದ್ದೇವೆ. ಆದರೂ ಅವರು ಬಣ್ಣ ಬಳಿಯುವಂತಹ ಕೆಲಸ ಮಾಡಿಕೊಂಡು ರಾಜಕಾರಣ ಮುಂದುವರಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಟೀಕಿಸಿದರು.
ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೋವಿಡ್ ವಿಚಾರದಲ್ಲಿ ಯಾವುದೇ ಅಕ್ರಮಗಳನ್ನು ನಡೆಸಿಲ್ಲ. ಕೋವಿಡ್ಗೆ ಸಂಬಂಧಿಸಿದ ಲೆಕ್ಕ ವಿರೋಧ ಪಕ್ಷದವರ ಮನೆಯ ಲೆಕ್ಕವಲ್ಲ. ಅದು ಸರ್ಕಾರದ ಲೆಕ್ಕ. ವಿರೋಧ ಪಕ್ಷದವರು ಅದೇನು ಮೆಕ್ಯಾನಿಸಂ ಮಾಡಿ ಲೆಕ್ಕ ಹಾಕುತ್ತಿದ್ದಾರೋ ನನಗೆ ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು.
ಕೋವಿಡ್ -19 ಸಮಸ್ಯೆ ಜನರನ್ನು ಕಾಡುತ್ತಿದೆ. ಇಂತಹ ಸಮಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಟ್ಟು ಜನರ ಕಷ್ಟಗಳಿಗೆ ಸ್ಪಂಧಿಸುವ ಕೆಲಸ ಮಾಡಬೇಕು. ಜನರ ಸಂಕಷ್ಟಗಳಿಗೆ ಬಾರದಿದ್ದರೆ ಅದೇ ರೀತಿ ಮುಂದುವರಿಯಲಿ, ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು.
ಕೋವಿಡ್-19 ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆಯ 30 ಸಾವಿರ ಸಿಬ್ಬಂದಿಗೆ ಡಬಲ್ ಸಂಬಳ ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೂ ಮುನ್ನ ಸರ್ಕಾರದ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.