ಕೋಯಿಕ್ಕೋಡ್ (ಕೇರಳ): ದುಬೈನಿಂದ ಆಗಮಿಸಿದ್ದ ಫ್ಲೈಟ್ X1344, ಬೋಯಿಂಗ್ 737 ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಕೇರಳದ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗ್ತಿದ್ದ ವೇಳೆ ರನ್ವೇಯಿಂದ ಜಾರಿದೆ.
ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ದೌಡಾಯಿಸಿದೆ. ಸಮರೋಪಾದಿಯಲ್ಲಿ ಎನ್ ಡಿಆರ್ಎಫ್ ತಂಡವು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ.
ಅವಘಡದಲ್ಲಿ ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ.ವಿಮಾನಕ್ಕೆ ಬೆಂಕಿ ತಗುಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಘಟನೆಯಲ್ಲಿ ಓರ್ವ ಪೈಲಟ್ ಹಾಗೂ ಇಬ್ಬರು ಪ್ರಯಾಣಿಕರು ಸಾವಿಗೀಡಾಗಿದ್ದು, ಗಾಯಗೊಂಡಿರುವ 35 ಮಂದಿಯನ್ನು ಕೊಂಡಾಟಿ ರಿಲೀಫ್ ಆಸ್ಪತ್ರೆಗೆ ರವಾನಿಸಲಾಗಿದೆ.
ದುಬೈನಿಂದ ಕೇರಳಕ್ಕೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನ ಭಾರಿ ಮಳೆಯಾಗುತ್ತಿದ್ದ ವೇಳೆ ಲ್ಯಾಂಡ್ ಆಗುತ್ತಿದ್ದಾಗ ಈ ಘಟನೆ ನಡೆದಿದೆ. ವಿಮಾನದಲ್ಲಿ ಇಬ್ಬರು ಪೈಲಟ್ಗಳು, 4 ಮಂದಿ ಸಿಬ್ಬಂದಿ, 10 ಹಸುಗೂಸು ಸೇರಿ ಒಟ್ಟು ವಿಮಾನದಲ್ಲಿ ಒಟ್ಟು 191ಕ್ಕೂ ಹೆಚ್ಚು ಮಂದಿ ಇದ್ದರು.
ವಿಮಾನ 7.38ಕ್ಕೆ ಲ್ಯಾಂಡಿಂಗ್ ಆಗಿತ್ತು. ಆದರೆ, ನಿಯಂತ್ರಣ ತಪ್ಪಿ 30 ಅಡಿ ಕೆಳಗೆ ಬಿದ್ದಿದೆ. ಇದರಿಂದಾಗಿ ವಿಮಾನ ಎರಡು ಭಾಗಗಳಾಗಿವೆ. ಪೈಲಟ್ಗೆ ರನ್ ವೇ ಸ್ಪಷ್ಟವಾಗಿ ಕಾಣದೆ ಅಪಫಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆ ಬೆನ್ನಲ್ಲೇ ಕೇರಳ ಸಿಎಂ ಪಿಣರಾಯ್ ವಿಜಯನ್ ಟ್ವೀಟ್ ಮಾಡಿದ್ದು, ಕರೀಪುರದಲ್ಲಿ ಕೋಳಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿರುವ ವಿಮಾನ ಪತನ ಬಗ್ಗೆ ಅಗ್ನಿಶಾಮಕದಳ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗಿದೆ. ರಕ್ಷಣೆಗೆ ಹಾಗೂ ವೈದ್ಯಕೀಯ ನೆರವಿಗೆ ಬೇಕಾದ ಅಗತ್ಯ ಸೇವೆಗಳನ್ನು ಹೊಂದಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಗೃಹಸಚಿವ ಅಮಿತ್ ಶಾ ಸಹ ಟ್ವೀಟ್ ಮಾಡಿ, ಕೋಳಿಕ್ಕೊಡ್ನಲ್ಲಿ ಏರ್ ಇಂಡಿಯಾ ವಿಮಾನದ ದುರಂತದ ಬಗ್ಗೆ ಕೇಳಿ ದುಃಖವಾಯಿತು. ಸ್ಥಳಕ್ಕೆ ಬೇಗ ತಲುಪಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡಕ್ಕೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.