ಯಲ್ಲಾಪುರ: ಪ್ರತಿಯೊಬ್ಬನು ರಾಮನಾಗಬೇಕು, ಪ್ರತಿ ಗ್ರಾಮಗಳು ಸ್ವರಾಜ್ಯವಾಗಬೇಕು ಎಂಬ ಗಾಂಧೀಜಿಯವರ ಕನಸನ್ನು ಅಕ್ಷರಶ: ನನಸು ಮಾಡಿದ್ದು ಆರ್ಎಸ್ಎಸ್. ಅಂತಹ ಸಂಘದ ಅಂಗಳದಲ್ಲಿ ಬೆಳೆದ ಹುಟ್ಟು ಹೋರಾಟಗಾರ, ವಂಚಿತ ಸಮುದಾಯದ ಶಾಂತಾರಾಮ ಸಿದ್ದಿಗೆ ನ್ಯಾಯ ಕೊಡುವ ಕೆಲಸ ಭಾಜಪ ಪಕ್ಷದಿಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಮಂಗಳವಾರ ಸಂಜೆ ಪಟ್ಟಣದ ಎಪಿಎಂಸಿ ರೈತಭವನದಲ್ಲಿ ಅಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ನಮ್ಮದು ಕುಟುಂಬ ರಾಜಕಾರಣವಿಲ್ಲದ ವಿಶಿಷ್ಟ ಪಕ್ಷವಾಗಿದೆ. ವಿಧಾನ ಪರಿಷತ್, ರಾಜ್ಯಸಭಾ ಸ್ಥಾನಗಳು ಜಾತಿ ಹಣ ಅಂತಸ್ತು ನೋಡಿ ಮಾರಾಟವಾಗುತ್ತಿರುವ ಕಾಲಘಟ್ಟದಲ್ಲಿ ಶಾಂತರಾಮರ ಸಮಾಜ ಸೇವೆಯನ್ನು ಗುರುತಿಸಿ ವಿ.ಪ ಸ್ಥಾನ ನೀಡಿರುವುದು ಅವರ ಸಮಾಜ ಸೇವೆಯ ಪರಿಕಲ್ಪನೆಯ ಸಾಧನೆಗೆ ಸಿಕ್ಕ ಗೌರವವಾಗಿದೆಎಂದು ಹರ್ಷ ವ್ಯಕ್ತಪಡಿಸಿದರು.
ಸೇವೆಗೆ ಮುಡಿಪು
ಅತಿ ಹೆಚ್ಚು ಬುಡಕಟ್ಟು ಜನಾಂಗವಿರುವ ಜಿಲ್ಲೆ ಉತ್ತರಕನ್ನಡ .ಆ ಸಮುದಾಯದಲ್ಲಿ ಅಕ್ಷರ ಗಗನಕುಸುಮವಾಗಿದ್ದ ಕಾಲದಲ್ಲಿ ಶಾಂತಾರಾಮ ಸಿದ್ದಿ ಪದವೀಧರರಾಗಿ ಉದ್ಯೋಗವನ್ನರಸಿ ಹೋಗದೇ ಪ್ರಕಾಶ ಕಾಮತರ ಪ್ರೇರಣೆಯಿಂದ ಸಮುದಾಯದ ಶ್ರೇಯೋಭಿವೃದ್ದಿಗೆ ಕಟಿಬದ್ದರಾಗಿ ನಿಂತಿದ್ದಾರೆ ಎಂದರು.
ನ್ಯಾಯ ಸಿಗಲಿದೆ
ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಮ ಹೆಬ್ಬಾರ ಮಾತನಾಡಿ, ಶಾಂತಾರಾಮ ಸಿದ್ದಿ ವಿ.ಪ ಸದಸ್ಯರಾಗಿ ಜಿಲ್ಲೆಯ ಎಲ್ಲ ಬುಡಕಟ್ಟು ಸಮುದಾಯವನ್ನು ಪ್ರತಿನಿಧಿಸುವ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಮೂಲಕ ಜವಾಬ್ದಾರಿಯುತ ಸ್ಥಾನಕ್ಕೆ ನ್ಯಾಯವನ್ನು ಒದಗಿಸಿಕೊಡುತ್ತಾರೆ ಎಂದರು.
ಉಮೇಶ ಭಾಗ್ವತ ಅಭಿನಂದನಾ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಸಂಸದ ಅನಂತಕುಮಾರ ಹೆಗಡೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲೆಯ ಶಾಸಕರಾದ ರೂಪಾಲಿ ನಾಯ್ಕ. ಸುನೀಲ ನಾಯ್ಕ, ದಿನಕರ ಶೆಟ್ಟಿ, ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಾಜಿ ಶಾಸಕರಾದ ಸುನೀಲ ಹೆಗಡೆ, ವಿವೇಕಾನಂದ ವೈದ್ಯ, ವಿಭಾಗ ಪ್ರಮುಖ ಶಿವಮೊಗ್ಗದ ಗಿರೀಶ ಪಟೇಲ,ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಂತರಾಮ ಸಿದ್ದಿ ದಂಪತಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಪರಶುರಾಮ ಸಿದ್ದಿ ಸನ್ಮಾನಿಸಲಾಯಿತು. ಹಳಿಯಾಳದ ಕಾಂಗ್ರೆಸ್ ಪಕ್ಷದ ಬಸ್ತಾಂವ್ ಸಿದ್ದಿ ಹಾಗೂ ಸಂಗಡಿಗರು ಬಿಜೆಪಿ ಸೇರ್ಪಡೆಯಾದರು. ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ ಸ್ವಾಗತಿಸಿದರು. ರೇಖಾ ಹೆಗಡೆ ವಂದೇ ಮಾತರಂ ಗೀತೆಹಾಡಿದರು. ವೆಂಕಟರಮಣ ಬೆಳ್ಳಿ ನಿರ್ವಹಿಸಿದರು. ಕಾರ್ಯದರ್ಶಿ ಪ್ರಸಾದ ಹೆಗಡೆ ವಂದಿಸಿದರು.