Sunday, April 18, 2021

Latest Posts

ವಚನ ಹಸ್ತಪ್ರತಿಗಳು ಆರಾಧನೆ ವಸ್ತುಗಳಾಗಿದ್ದು ವಿಷಾದನೀಯ: ಹಿರಿಯ ಸಾಹಿತಿ ಮ.ಗು.ಬಿರಾದಾರ

ಹೊಸ ದಿಗಂತ ವರದಿ, ಕಲಬುರಗಿ:

ಶರಣ ಸಾಹಿತ್ಯಕ್ಕೆ ಸಂಬಂಧಪಟ್ಟ ವಚನಗಳ ಹಸ್ತಪ್ರತಿಗಳು ಸಾಕಷ್ಟು ಹಾಳಾಗಿವೆ. ಜನರು ಆ ಹಸ್ತಪ್ರತಿಗಳನ್ನು ಜಗಲಿ ಮೇಲಿಟ್ಟು ವಿಭೂತಿ, ಕುಂಕುಮ ಹಚ್ಚಿ ಪೂಜೆ ಮಾಡಿ ಆರಾಧನೆಯ ವಸ್ತುಗಳನ್ನಾಗಿಸಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ. ಮ.ಗು.ಬಿರಾದಾರ ಅವರು ವಿಷಾದ ವ್ಯಕ್ತಪಡಿಸಿದರು.
ಗುರುವಾರ ಕಲಬುರಗಿಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಬಸವ ಪೀಠವು ವಿ.ವಿ.ಯ ಸಮ್ಮೇಳನ ಸಭಾಂಗಣದಲ್ಲಿ “ವಚನ ಸಾಹಿತ್ಯ, ಸಾಮಾಜಿಕ, ಸಾಂಸ್ಕøತಿಕ ಮತ್ತು ವೈಚಾರಿಕ ಅನುಸಂಧಾನ” ಕುರಿತು ಆಯೋಜಿಸಿದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಮೌಲ್ಯವನ್ನು ಅರಿಯುವ ಬದಲು ಪೂಜನೀಯ ಸ್ಥಾನದಲಿಟ್ಟಿದ್ದು ಬೇಸರದ ಸಂಗತಿ ಎಂದರು.
12ನೇ ಶತಮಾನದ ಕಾಲಘಟ್ಟದಲ್ಲಿ ಮಠಗಳು ವಚನಗಳಿಗೆ ಧಾರ್ಮಿಕ-ಜಾತಿ ಸ್ವರೂಪವನ್ನು ನೀಡಿದವು. ಇದರಿಂದಾಗಿ ಬೇರೆ ಧರ್ಮದವರು ವಚನಗಳತ್ತ ಮುಖ ಮಾಡಲು ಸಾಧ್ಯವಾಗಲಿಲ್ಲ. ಮಹಾ ಮಾನವತಾವಾದಿ ಬಸವಣ್ಣನವರನ್ನು ಒಂದೆಡೆ ಕಟ್ಟಿಹಾಕುವ ಹುನ್ನಾರವನ್ನು ಆಗಿನ ಮಠಸ್ಥರು ಮಾಡಿದ್ದರು. ಹೀಗಾಗಿ ವಚನ ಸಾಹಿತ್ಯದ ಪ್ರಚಾರ ಕ್ರಿಯೆ ಪಸರಗೊಳ್ಳಲಿಲ್ಲ ಎಂದರು.
ವಚನವು ಸಾಮಾಜಿಕ, ಆಧ್ಯಾತ್ಮಿಕ, ಸಾಹಿತ್ಯಿಕ ಸಂಪತ್ತು ಎಂದು ಅಭಿಪ್ರಾಯಪಟ್ಟ ಅವರು, ಬಸವಣ್ಣ ಅವರ ಚಿಂತನೆಗಳು ಸಾಮಾಜಿಕ ಕ್ರಿಯಾತ್ಮಕ ಶಕ್ತಿಯಾಗಿವೆ. ಶರಣರ ವಚನಗಳನ್ನು ನಾವು ಸೃಜನಾತ್ಮಕವಾಗಿ ಬೆಳೆಸಬೇಕು ಎಂದು ಕರೆ ನೀಡಿದರು.
ವಚನ ಸಾಹಿತ್ಯವನ್ನು ಡಾರ್ವಿನ್ ಅವರ ವಿಕಾಸವಾದಕ್ಕೆ ತೌಲನಿಕವಾಗಿ ಉದಾಹರಣೆ ನೀಡಿದ ಮ.ಗು. ಬಿರಾದಾರ ಅವರು, ಡಾರ್ವಿನ್‍ನ ಜೀವ ವಿಕಾಸವಾದಂತೆ ವಚನ ಸಾಹಿತ್ಯದಲ್ಲಿ ಬಸವಣ್ಣ ಅವರು ಆತ್ಮ ವಿಕಾಸನವನ್ನು ಹಂತ-ಹಂತವಾಗಿ ಮಾಡಿದ್ದಾರೆ. ಪ್ರಸ್ತುತ ವಚನ ಸಾಹಿತ್ಯವನ್ನು ಸೃಜನಾತ್ಮವಾಗಿ ಬಳಸುವ ಮೂಲಕ ವಚನದಲ್ಲಿ ರೂಪಾಂತರ ಕ್ರಿಯೆ ಆಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ವಿ.ಅಳಗವಾಡಿ ಅವರು ಮಾತನಾಡಿದರು.
ಸಮ್ಮೇಳನದಲ್ಲಿ ವಿ.ವಿ. ಕುಲಸಚಿವ ಪ್ರೊ.ಬಸವರಾಜ ಡೊಣೂರ, ಬಸವ ಪೀಠದ ಸಂಯೋಜಕ ಗಣಪತಿ ಬಿ. ಸಿನ್ನೂರ, ವಿಶ್ವವಿದ್ಯಾಲಯದ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿದಂತೆ ಬಸವ ಸಮಿತಿಯ ಹಲವು ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss