Sunday, July 3, 2022

Latest Posts

ವನ್ಯಜೀವಿ ದಾಳಿಗೆ 10 ಲಕ್ಷ ಪರಿಹಾರ: ಸಚಿವ ಆನಂದ್ ಸಿಂಗ್

ಬೆಂಗಳೂರು: ರಾಜ್ಯದಲ್ಲಿ ಆನೆ ಸೇರಿ ಹಲವು ವನ್ಯ ಜೀವಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ನೀಡುವ ಪರಿಹಾರದ ಮೊತ್ತವನ್ನು 7.5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಏರಿಸಲು ಸರ್ಕಾರ ನಿರ್ಧರಿಸಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದರು.

ಶೂನ್ಯವೇಳೆಯಲ್ಲಿ ಕಾಡಾನೆ ದಾಳಿ ಕುರಿತ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈಗಾಗಲೇ ಪರಿಹಾರದ ಮೊತ್ತ 5
ಲಕ್ಷ ರೂ.ಗಳಿಂದ 7.5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಮೃತರ ಕುಟುಂಬಗಳಿಗೆ ಈಗಾಗಲೇ ನೀಡಲಾಗುತ್ತಿರುವ 5 ವರ್ಷಗಳ ಅವಧಿಯ 5 ಸಾವಿರ ರೂ. ತಿಂಗಳ ಮಾಸಾಶನ 10 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗುವುದು. ಈ ಪ್ರಸ್ತಾವನೆ ಈಗಾಗಲೇ ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ ಎಂದು ವಿವರಿಸಿದರು. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಾಡಾನೆ ದಾಳಿ ಪ್ರಕರಣಗಳು ಇಳಿಮುಖವಾಗಿದೆ. ವನ್ಯಜೀವಿಗಳು ನಾಡಿಗೆ ಪ್ರವೇಶಿಸುವುದನ್ನು ತಡೆಯಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.

ಇದಕ್ಕೂ ಮುನ್ನ ಈ  ಪ್ರಸ್ತಾಪಿಸಿದ ಶಾಸಕ ಎ.ಟಿ.ರಾಮಸ್ವಾಮಿ, ಕಾಡಾನೆಗಳ ನಿರಂತರ ಉಪಟಳದಿಂದ ಅರಣ್ಯದ ಸಮೀಪದ ಹಳ್ಳಿಗಳ ರೈತರು ಬಸವಳಿದಿದ್ದಾರೆ. ಅನೇಕ ಕಡೆ ಜೀವಹಾನಿ ಸಂಭವಿಸಿದೆ. ಕಾಡಿನಲ್ಲಿ ಕುಡಿಯುವ ನೀರು ಮತ್ತು ಆಹಾರದ ಕೊರತೆ ಹೆಚ್ಚಾಗಿದ್ದು, ವನ್ಯಜೀವಿಗಳು ನಾಡಿನ ಕಡೆಗೆ ಬರುವ ಭೀತಿ ಹೆಚ್ಚಾಗಿದೆ. ಇದನ್ನು ತಡೆಯಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಎಚ್.ಕೆ.ಕುಮಾರ ಸ್ವಾಮಿ, ಸಕಲೇಶಪುರ, ಆಲೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಅರಣ್ಯಾಧಿಕಾರಿಗಳು ಆನೆಗಳನ್ನು ಹಿಡಿಯಲು ಸರ್ಕಾರದ ಅನುಮತಿಗಾಗಿ ಕಾದು ಕುಳಿತಿರುತ್ತಾರೆ. ಇತ್ತ ಆನೆಗಳು ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ಸಮಸ್ಯೆಯಿಂದ ತಾವು ಕ್ಷೇತ್ರದ ಜನರಿಗೆ ಉತ್ತರ ಹೇಳಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಯಲು ಅರಣ್ಯಾಧಿಕಾರಿಗಳಿಗೆ, ಒಂಟಿ ಆನೆಗಳು ಕಂಡಲ್ಲಿ ಅದನ್ನು ಸೆರೆಹಿಡಿಯುವ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್, ಕೊಡಗು ಜಿಲ್ಲೆಯಲ್ಲಿ ಕೂಡ ಆನೆಗಳ ಹಾವಳಿ ಮುಂದುವರಿದಿದೆ. ಅವುಗಳನ್ನು ಹಿಡಿಯಲು ಅರಣ್ಯ ಇಲಾಖೆ ಕಂದಕಗಳನ್ನು ನಿರ್ಮಿಸಿದೆಯಾ ದರೂ, ಪ್ರತಿ ಆರು ತಿಂಗಳಿಗೊಮ್ಮೆ ಅದನ್ನು ದುರಸ್ತಿಗೊಳಿಸದಿದ್ದಲ್ಲಿ ಅದು ನಿಷ್ಪ್ರಯೋಜಕವಾಗುತ್ತದೆ. ರೈಲ್ವೆ ಹಳಿಗಳ ಅಳವಡಿಕೆ ಕೂಡ ಪರಿಣಾಮಕಾರಿ ಯಾಗಿ ಕೆಲಸ ಮಾಡುತ್ತಿಲ್ಲ ಎಂದರು.

ಕಾಡಿನಿಂದ ಆನೆಗಳು ಪದೇಪದೆ ನಾಡಿಗೆ ಏಕೆ ಬರುತ್ತವೆ ಎಂಬುದರ ಕುರಿತು ಕೂಡ ಆಲೋಚಿಸಬೇಕಿದೆ. ಅರಣ್ಯದಲ್ಲಿ ಅವುಗಳಿಗೆ ಮೇವಿನ ಕೊರತೆ ಉಂಟಾಗಿದರಿಂದ ಅವುಗಳು ಆಹಾರ ಅರಸುತ್ತಾ ನಾಡಿನತ್ತ ಪಯಣಿಸುತ್ತಿವೆ. ಆದ್ದರಿಂದ ಕಾಡಿನಲ್ಲಿರುವ ಟೀಕ್ ಮರಗಳನ್ನು ತೆಗೆದು, ಹಲಸು, ಮಾವು ಮತ್ತಿತರರ ಆನೆಗಳ ಮೇವಿಗೆ ಉಪಯುಕ್ತವಾಗುವಂತಹ ಮರಗಳನ್ನು ನೆಡಬೇಕು. ಅಲ್ಲಲ್ಲಿ ಕೆರೆಗಳನ್ನು ತೋಡಿ, ಕುಡಿಯುವ ನೀರು ಒದಗಿಸಬೇಕು ಎಂದು ಸಲಹೆ ನೀಡಿದರು. ಈ ಸಲಹೆಗಳಿಗೆ ಪಕ್ಷಾತೀತವಾಗಿ ಹಲವು ಶಾಸಕರು ಧ್ವನಿಗೂಡಿ ಸಿದರು. ಇದು ಗಂಭೀರ ಸಮಸ್ಯೆಯಾಗಿದ್ದು, ಕೇವಲ ಚರ್ಚೆಗೆ ಸೀಮಿತವಾಗಬಾರದು. ಪರಿಹಾರ ಕ್ರಮಗಳನ್ನು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಚಿವ ಆನಂದ್ ಸಿಂಗ್, ಸಂಬಂಧಿಸಿದ ಕ್ಷೇತ್ರಗಳ ಶಾಸಕರು, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss