ಮೈಸೂರು: ಮಹಾಮಾರಿ ಕೊರೋನಾ ವೈರಸ್ ಹರಡುವಿಕೆ ತಡೆಯುವ ಕ್ರಮವಾಗಿ ವರಮಹಾಲಕ್ಷ್ಮಿಹಬ್ಬದ ಪ್ರಯುಕ್ತ ನಗರದ ದೇವರಾಜ ಮಾರುಕಟ್ಟೆಯಲ್ಲಿರುವ ಹೂವಿನ ಅಂಗಡಿಗಳನ್ನು ರೈಲು ನಿಲ್ದಾಣದ ಬಳಿಯಿರುವ ಜೆ.ಕೆ.ಮೈದಾನಕ್ಕೆ ಮೂರು ದಿನಗಳ ಕಾಲ ಸ್ಥಳಾಂತರಿಸಿ ಮೈಸೂರು ನಗರಪಾಲಿಕೆಯ ಆಯುಕ್ತ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ದೇವರಾಜ ಮಾರುಕಟ್ಟೆಯಲ್ಲಿರುವ ಹೂವಿನ ಮಳಿಗೆಗಳಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ, ಮಾಸ್ಕ್ಗಳನ್ನು ಧರಿಸದೆ ಹೂವುಗಳನ್ನು ಮುಗಿ ಬಿದ್ದು ಖರೀದಿಸುತ್ತಿದ್ದಾರೆ. ಅಲ್ಲದೆ ಮಹಾಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ಹೂವುಗಳು, ತರಕಾರಿ, ಹಣ್ಣುಗಳ ಖರೀದಿಗೆಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುವ ಕಾರಣ, ಕೊರೋನಾ ಸೋಂಕು ಮತ್ತಷ್ಟು ಹರಡಲು ಕಾರಣವಾಗಬಹುದು. ಇದನ್ನು ತಡೆಯುವ ನಿಟ್ಟಿನಲ್ಲಿ ಜುಲೈ ೨೯ ರಿಂದ ೩೧ರ ತನಕ ಮಾರುಕಟ್ಟೆಯಲ್ಲಿರುವ ಎಲ್ಲಾ ಹೂವಿನ ಅಂಗಡಿಗಳು, ವ್ಯಾಪಾರಿಗಳನ್ನು ಜೆ.ಕೆ.ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದೆ.