ಹೊಸದಿಗಂತ ಆನ್ಲೈನ್ ಡೆಸ್ಕ್:
ವರುಣನ ಆರ್ಭಟಕ್ಕೆ ಸಿಲುಕಿ ಇನ್ನೇನು ಯಕ್ಷಗಾನ ಬಯಲಾಟ ರದ್ದಾಗುತ್ತದೆ ಎಂಬಷ್ಟರಲ್ಲಿ ಕಲಾ ಪ್ರೇಮಿಯೋರ್ವರು ತಮ್ಮ ಮನೆಯ ಅಂಗಳದಲ್ಲಿಯೇ ಎಲ್ಲಾ ವ್ಯವಸ್ಥೆ ಮಾಡಿ ಯಕ್ಷಗಾನ ಪ್ರದರ್ಶನ ಯಶಸ್ವಿಯಾಗುವಂತೆ ಮಾಡಿದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲಿ ನಡೆದಿದೆ.
ನಡೆದದ್ದಿಷ್ಟು…
ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಯಿಂದ ಮಳಲಿ ಪೂವಾರಿನ ಬಾಕಿಮಾರು ಗದ್ದೆಯಲ್ಲಿ ರಾತ್ರಿ ಹತ್ತು ಸಮಸ್ತರ ವತಿಯಿಂದ ಯಕ್ಷಗಾನ ಬಯಲಾಟ ನಡೆಯಬೇಕಿತ್ತು. ಆದರೆ ಸಂಜೆಯಾಗುತ್ತಿದ್ದಂತೆ ಜೋರು ಮಳೆ ಬಂದ ಕಾರಣ ರಂಗಸ್ಥಳ ಒದ್ದೆಯಾಗಿ ಪ್ರೇಕ್ಷಕರು ಕುಳಿತುಕೊಳ್ಳುವ ಸ್ಥಳದಲ್ಲಿ ನೀರು ನಿಂತು ಕೆಸರಾಗಿತ್ತು. ಅಲ್ಲದೆ ಯಕ್ಷಗಾನ ಪ್ರಿಯರಿಗೆ ಭೋಜನ ವ್ಯವಸ್ಥೆಯನ್ನೂ ಏರ್ಪಡಿಸಲಾಗಿತ್ತು. ಆದರೆ ಭಾರೀ ಮಳೆಯಿಂದ ಯಕ್ಷಗಾನ ರದ್ದಾಗಿ ಊಟವೆಲ್ಲಾ ಪೋಲಾಗುವ ಸಂಭವವಿತ್ತು.
ಆದರೆ ಇದರಿಂದ ಧೃತಿಗೆಡದ ಯಕ್ಷಗಾನ ಬಯಲಾಟ ಸಮಿತಿಯ ರಾಮಚಂದ್ರ ಭಟ್ ಅವರು ತನ್ನ ಮನೆಯ ಅಂಗಳದಲ್ಲೇ ಚಪ್ಪರ ಹಾಕಿ ಯಕ್ಷಗಾನಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿದರು. ಮೊದಲೇ ಶೀಟಿನ ಚಪ್ಪರ ಇದ್ದುದರಿಂದ ಮಳೆಯ ಆತಂಕವೇ ಇರಲಿಲ್ಲ. ಬಂದ ಯಕ್ಷಪ್ರಿಯರಿಗೂ ಅಂಗಳದಲ್ಲೇ ಊಟೋಪಚಾರ ಕಲ್ಪಿಸಿ ಬೆಳಗ್ಗಿನ ತನಕ ಯಾವ ಅಡ್ಡಿಯೂ ಇಲ್ಲದೆ ಸಾಂಗವಾಗಿ ಯಕ್ಷಗಾನ ಬಯಲಾಟ ನಡೆದಿದೆ. ರಾಮಚಂದ್ರ ಭಟ್ ಅವರ ಯಕ್ಷಗಾನ ಪ್ರೀತಿಗೆ ತಕ್ಕಂತೆ ಸಾಥ್ ನೀಡಿದ ಪ್ರೇಕ್ಷಕರು ಸಂತೃಪ್ತಿಯಿಂದ ಪೂರ್ತಿ ಯಕ್ಷಗಾನ ವೀಕ್ಷಿಸಿ ತೆರಳಿದ್ದಾರೆ.