ಕಾಸರಗೋಡು: ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡರಂಗದ ಚುನಾಯಿತ ಸದಸ್ಯೆಯ ವಾರ್ಡ್ ನಲ್ಲಿ ಈ ಸದಸ್ಯೆ , ಇಂಜಿನಿಯರ್ ಹಾಗೂ ಪಂಚಾಯತ್ ಆಡಳಿತದ ಪ್ರಮುಖರ ನೇತೃತ್ವದಲ್ಲಿ ಉದ್ಯೋಗ ಖಾತರಿ ಯೋಜನೆಯ ಮೂಲಕ ಲಕ್ಷಾಂತರ ರೂಪಾಯಿ ಗುಳುಂ ಮಾಡಲಾಗಿದೆ. ಈ ಪ್ರಕರಣದ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು ಎಂದು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿಯು ಆಗ್ರಹಿಸಿದೆ.
ತನಿಖೆಯಿಂದ ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕು. ಈ ವಂಚನೆಯಲ್ಲಿ ಭಾಗಿಯಾಗಿರುವ ಕುಣಿಬೈಲು ವಾರ್ಡ್ ನ ಎಡರಂಗ ಸದಸ್ಯೆಯ ಸದಸ್ಯತ್ವ ಕೂಡಲೇ ರದ್ದು ಮಾಡಬೇಕೆಂದು ಬಿಜೆಪಿ ಪಂಚಾಯತ್ ಘಟಕವು ಒತ್ತಾಯಿಸಿದೆ.
ಉದ್ಯೋಗ ನಡೆಸದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ಹಣವನ್ನು ಗುಳುಂ ಮಾಡಲಾಗಿದೆ. ಕೇರಳದಲ್ಲಿ ಎಡರಂಗ ನೇತೃತ್ವದ ಸರಕಾರವು ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದೆ. ಅದೇ ರೀತಿ ವರ್ಕಾಡಿಯ ಗ್ರಾಮ ಪ್ರದೇಶದಲ್ಲಿ ಎಡರಂಗದ ಚುನಾಯಿತ ಸದಸ್ಯೆಯು ಲಕ್ಷಾಂತರ ರೂಪಾಯಿ ಮೊತ್ತವನ್ನು ನಕಲಿ
ದಾಖಲೆಗಳ ಮೂಲಕ ದೋಚಿದ್ದಾರೆ. ಕಳ್ಳತನವು ಎಡರಂಗ ಒಕ್ಕೂಟದ ಜಾಯಮಾನ ಎಂಬುದಾಗಿ ಬಿಜೆಪಿ ಪಂಚಾಯತ್ ಸಮಿತಿಯು ಲೇವಡಿ ಮಾಡಿದೆ.
ಇದೀಗ ವರ್ಕಾಡಿಯ ಪ್ರಕರಣವನ್ನು ಮುಚ್ಚಿ ಹಾಕಲು ಒಳಗಿಂದೊಳಗೆ ಪ್ರಯತ್ನಗಳು ನಡೆಯುತ್ತಿವೆ. ಎಡರಂಗದ ವಂಚನೆಗೆ ಆಡಳಿತ ಪಕ್ಷ ಮುಸ್ಲಿಂಲೀಗ್ ಹಾಗೂ ಕಾಂಗ್ರೆಸ್ ಬೆಂಬಲ ನೀಡುತ್ತಿವೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
ಗುಳುಂಕರಿಸಿದ ಮೊತ್ತ 5 ಲಕ್ಷವೋ 10 ಲಕ್ಷವೋ ಎಂಬುದನ್ನು ಕುಣಿಬೈಲು ವಾರ್ಡ್ ಸದಸ್ಯೆ ಬಹಿರಂಗಪಡಿಸಬೇಕು. ಅಲ್ಲದೆ ಪ್ರಜಾಪ್ರಭುತ್ವದಲ್ಲಿ ಮತ್ತು ಪಂಚಾಯತ್ ವ್ಯವಸ್ಥೆಯಲ್ಲಿ ಒಂದಿನಿತಾದರೂ ವಿಶ್ವಾಸವಿದ್ದರೆ ವಾರ್ಡ್ ಸದಸ್ಯೆಯು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿಯು ಸವಾಲೆಸೆದಿದೆ.