Thursday, August 11, 2022

Latest Posts

ವರ್ಷದೊಳಗೆ ದ.ಕ ಜಿಲ್ಲೆಯಲ್ಲಿ ಭ್ರಷ್ಟಾಚಾರ, ಡ್ರಗ್, ಪ್ಲಾಸ್ಟಿಕ್ ಮುಕ್ತ: ಸಂಸದ ನಳಿನ್‌ಕುಮಾರ್

ಮಂಗಳೂರು: ಮುಂದಿನ ಒಂದು ವರ್ಷದಲ್ಲಿ ದಕ್ಷಿಣ ಕನ್ನಡ ಭ್ರಷ್ಟಾಚಾರ, ಪ್ಲಾಸ್ಟಿಕ್ ಮತ್ತು ಡ್ರಗ್ ಮುಕ್ತ ಜಿಲ್ಲೆಯಾಗಲಿದೆ. ಆ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಅರ್ಥಪೂರ್ಣಗೊಳಿಸಲಾಗುವುದು ಎಂದು ಸಂಸತ್ ಸದಸ್ಯ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ‘ಸೇವಾ ಸಪ್ತಾಹ’ದ ಭಾಗವಾಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಗುರುವಾರ ನಡೆದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಾಲೇ ನಿರ್ದೇಶನ ನೀಡಲಾಗಿದೆ. ಜಿಲ್ಲೆಯಲ್ಲಿ ಇರುವ ಪಬ್‌ಗಳನ್ನು ನಿಲ್ಲಿಸುವಂತೆ ತಾಕೀತು ಮಾಡಲಾಗಿದೆ. ಅವರು ನಿಲ್ಲಿಸದಿದ್ದರೆ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ಕಾರ್ಯಕರ್ತರು ನ್ಯಾಯಾಲಯದ ಮೆಟ್ಟಲೇರಿ ಅವುಗಳನ್ನು ಬಂದ್ ಮಾಡಲಿದ್ದಾರೆ. ಜಿಲ್ಲೆಯ ಯುವ ಜನಾಂಗ ಡ್ರಗ್ ಮಾಫಿಯಾಕ್ಕೆ ಬಲಿಯಾಗುವುದನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದು ನಳಿನ್‌ಕುಮಾರ್ ನುಡಿದರು.
ಪ್ಲಾಸ್ಟಿಕ್ ಮುಕ್ತ
ಸ್ವಚ್ಚತೆ ಮತ್ತು ಪರಿಸರ ಸಂರಕ್ಷಣೆ ಪ್ರಧಾನ ಮಂತ್ರಿಗಳಿಗೆ ಅತ್ಯಂತ ಪ್ರೀತಿಯ ವಿಷಯಗಳಾಗಿವೆ. ಅದರ ಭಾಗವಾಗಿ ಪ್ಲಾಸ್ಟಿಕ್ ಮುಕ್ತ ದಕ್ಷಿಣ ಕನ್ನಡ ಬಿಜೆಪಿಯ ಧ್ಯೇಯವಾಗಿದೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಗಾಗಿ ಪಕ್ಷ ಅಭಿಯಾನವನ್ನು ಹಮ್ಮಿಕೊಳ್ಳಲಿದೆ. ಜನತೆ ಅಭಿಯಾನದ ಜೊತೆಗಿರಬೇಕು ಎಂದು ಸಂಸತ್ ಸದಸ್ಯರು ಹೇಳಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಫ್ಲೆಕ್ಸ್‌ಗಳು ರಾರಾಜಿಸುವುದಿಲ್ಲ. ಪಕ್ಷ ಅದಕ್ಕೆ ಅವಕಾಶ ಕೊಡುವುದಿಲ್ಲ. ಸ್ಥಳೀಯಾಡಳಿತ ಸಂಸ್ಥೆಗಳು ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿ ಮಾಡಲು ಬಿಜೆಪಿ ಆಗ್ರಹಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ನುಡಿದರು.
ಭ್ರಷ್ಟಾಚಾರಕ್ಕೆ ಕೊಕ್
ಸರಕಾರಿ ಕಚೇರಿಗಳಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರವನ್ನು ಕಿತ್ತೊಗೆದು ಜನಸಾಮಾನ್ಯರಿಗೆ ಅನುಕೂಲಕರ ವಾತಾವರಣ ಸೃಷ್ಠಿಸುವುದು ಪಕ್ಷದ ಜವಾಬ್ದಾರಿಯಾಗಿದೆ. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಅಥವಾ ಪದಾಧಿಕಾರಿಗಳ ಮೇಲೆ ಭ್ರಷ್ಟಾಚಾರದ ದೂರು ಬಂದರೂ ಕ್ರಮ ಶತ:ಸಿದ್ಧ. ಅಂತಹ ವ್ಯಕ್ತಿಗಳನ್ನು ಯಾವುದೇ ಮುಲಾಜಿಲ್ಲದೆ ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ನಳಿನ್‌ಕುಮಾರ್ ಕಟೀಲ್ ಎಚ್ಚರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ವಿಧಾನ ಸಭಾ ಸದಸ್ಯರು ಮತ್ತು ವಿಧಾನ ಪರಷತ್ತು ಸದಸ್ಯರು ತಮ್ಮ ಕಾರ್ಯಾಲಯಗಳಲ್ಲಿ ತಕ್ಷಣದಿಂದ ಭ್ರಷ್ಟಾಚಾರದ ವಿರೋಧಿ ಹೆಲ್ಪ್ ಡೆಸ್ಕ್‌ಗಳನ್ನು ತೆರೆಯ ಬೇಕು. ಯಾವುದೇ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಭ್ರಷ್ಟಾಚಾರದಲ್ಲಿ ನಿರತರಾಗಿದ್ದರೆ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಸಂಸತ್ ಸದಸ್ಯರು, ಶಾಸಕರು, ವಿಧಾನ ಪರಿಷತ್ತು ಸದಸ್ಯರು ಸರಕಾರಿ ಕಚೇರಿಗಳಿಗೆ ತೆರಳಿ ಅಲ್ಲಿಯ ಕಾರ್ಯಕ್ಷಮತೆಯನ್ನು ಪರಿಶೀಲನೆ ನಡೆಸುವ ಕಾರ್ಯವನ್ನು ಇಂದಿನಿಂದಲೇ ಕೈಗೆತ್ತಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕೋವಿಡ್‌ಗೆ ಸ್ಪಂದನೆ
ಕೋವೀಡ್ ಸೋಂಕಿತರಾಗಿ ಹೋಮ್ ಐಸೊಲೇಶನ್‌ನಲ್ಲಿ ಇರುವ ರೋಗಿಳಿಗೆ ಅಗತ್ಯ ಸಹಾಯಕ್ಕೆ ಬಿಜೆಪಿ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷರು ಕೋವಿಡ್ ಸೋಂಕಿನಿಂದ ಹೊರ ಬಂದವರು ಪ್ಲಾಸ್ಮಾ ದಾನಕ್ಕೆ ಸಿದ್ಧರಾಗ ಬೇಕು ಎಂದು ಕರೆ ನೀಡಿದರು.
ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಸಂಚಾಲಕ ಡಾ.ಶರತ್ , ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ನಿಮಿತ್ತ ರಕ್ತದಾನ ಮಾಡುತ್ತಿರುವುದು ಅತ್ಯಂತ ಶ್ರೇಷ್ಟವಾದ ಕಾರ್ಯವಾಗಿದೆ. ಒಬ್ಬರು ದಾನ ಮಾಡಿದ ರಕ್ತ ನಾಲ್ಕು ಮಂದಿಯ ಜೀವ ಉಳಿಸಬಲ್ಲುದು ಎಂದರು.
ಜಿಲ್ಲೆಯ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಶೀಘ್ರವೇ ಪ್ಲಾಸ್ಮಾ ಪಡೆಯುವ ಘಟಕ ಸ್ಥಾಪನೆಯಾಗಲಿದೆ ಎಂದು ಡಾ.ಶರತ್ ತಿಳಿಸಿದರಲ್ಲದೆ, ರಕ್ತ ದಾನಕ್ಕೆ ಮುಂದಾದ ಯುವ ಮೋರ್ಚಾದ ಕಾರ್ಯಕರ್ತರನ್ನು ಅಭಿನಂದಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಮೇಯರ್ ದಿವಾಕರ ಪಾಂಡೇಶ್ವರ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಧೀರಜ್‌ಪ್ರಸಾದ್, ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು,   ಸತೀಶ್ ಕುಂಪಲ ಮೊದಲಾದವರಿದ್ದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗುರುದತ್ತ ನಾಯಕ್ ಸ್ವಾಗತಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss