Monday, July 4, 2022

Latest Posts

ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆ ವಿವಾದ: 4 ತಿಂಗಳಲ್ಲಿ ದಾಖಲೆ ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಸೂಚನೆ

ಹೊಸ ದಿಗಂತ ವರದಿ, ಶಿವಮೊಗ್ಗ:

ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಾಲ್ಕು ತಿಂಗಳಲ್ಲಿ ದಾಖಲೆ ಪರಿಶೀಲಿಸಿ ಸಮಸ್ಯೆ ಪರಿಹರಿಸಿ ವರದಿ ನೀಡುವಂತೆ ಲೋಕಾಯುಕ್ತರು ಸೂಚಿಸಿದ್ದಾರೆ ಎಂದು ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಿವೇಶನ ನೀಡಲಾಗಿರುವ ಎಲ್ಲರ ದಾಖಲೆಗಳ ಪರಿಶೀಲಿಸಬೇಕು. ಸೂಚಿತ ಮಾನದಂಡದಂತೆ ದಾಖಲೆಗಳು ಸರಿಯಾಗಿದ್ದರೆ ಅಂತಹವರಿಗೆ ನಿವೇಶನ ನೀಡಬಹುದು. ದಾಖಲೆಗಳು ಸರಿಯಾಗಿಲ್ಲವೆಂದರೆ ಹಾಗೂ ನಿವೇಶನ ಪಡೆಯಲು ಅನರ್ಹರೆಂದು ಕಂಡು ಬಂದರೆ ಬಡ್ಡಿ ಸಮೇತ ಠೇವಣಿ ಹಣ ವಾಪಸ್ ನೀಡಿ, ನಿವೇಶನ ವಾಪಸ್ ಪಡೆಯುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಒಟ್ಟು 1305 ನಿವೇಶನಗಳಲ್ಲಿ 498 ನಿವೇಶನಗಳ ದಾಖಲೆ ಕ್ರಮಬದ್ಧವಾಗಿದ್ದು, ಫಲಾನುಭವಿಗಳು ಕೂಡ ಅರ್ಹರಾಗಿದ್ದಾರೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ. ಅಧ್ಯಕ್ಷರ ವಿವೇಚನಾ ಕೋಟಾದಲ್ಲಿ ನೀಡಿರುವ 142 ನಿವೇಶನಗಳನ್ನು ರದ್ದುಪಡಿಸಲಾಗಿದೆ. ಪತಿ, ಪತ್ನಿ ಪ್ರಕರಣದ 32 ನಿವೇಶಗಳನ್ನು ರದ್ದುಪಡಿಸಲಾಗಿದೆ. ಆದರೆ ಅವರ ದಾಖಲೆಗಳನ್ನು ಪರಿಶೀಲಿಸಿ ಹಾಗೂ ನಿವೇಶನ ಪಡೆಯಲು ಅರ್ಹರಾಗಿದ್ದರೆ ಒಬ್ಬರಿಗೆ ಮಾತ್ರ ನೀಡುವಂತೆಯೂ ಸೂಚಿಸಿದೆ ಎಂದು ಹೇಳಿದರು.
ಅಪ್ರಾಪ್ತರಿಗೆ ನೀಡಿರುವ ನಿವೇಶನ, ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರಿಗೆ ನೀಡಲಾಗಿರುವ ನಿವೇಶನ ರದ್ದಾಗಿವೆ. ಒಟ್ಟು 807 ನಿವೇಶನಗಳನ್ನು ರದ್ದುಪಡಿಸಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಿ ಹಾಗೂ ದಾಖಲೆಗಳು ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು. ಫಲಾನುಭವಿಗಳು ಅರ್ಹರಾಗಿದ್ದರೆ ನಿವೇಶನ ನೀಡಬಹುದೆಂದು ತಿಳಿಸಿದೆ ಎಂದರು.
ಲೋಕಾಯುಕ್ತರ ಆದೇಶದಂತೆ ನಿವೇಶನ ಮರು ಹಂಚಿಕೆಗೆ ಕ್ರಮಕೈಗೊಳ್ಳಲಾಗುತ್ತದೆ. ಸುಳ್ಳು ದಾಖಲೆಗಳನ್ನು ನೀಡಿ ನಿವೇಶನ ಪಡೆದವರು ನಿವೇಶನ ಹಿಂತಿರುಗಿಸಿದರೆ ಒಳ್ಳೆಯದು. ಇಲ್ಲವೇ ಬೇರೆ ಏನಾದರೂ ತಂತ್ರ ಬಳಸಿದರೆ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶ ಕಲ್ಪಿಸಿದೆ. ಲೋಕಾಯುಕ್ತ ನಿರ್ದೇಶನದಂತೆ ಮುಂದಿನ ಮೂರು ತಿಂಗಳಲ್ಲಿ ಏನೇನು ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ಲೋಕಾಯುಕ್ತರಿಗೆ ವರದಿ ನೀಡಲಾಗುತ್ತದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss