ಹೊಸದಿಗಂತ ಆನ್ಲೈನ್ ಡೆಸ್ಕ್:
ಅತ್ತ ತನ್ನ ಹೊಸ ಸೇವಾ ನಿಯಮಗಳಿಂದಾಗಿ ವಾಟ್ಸ್ ಆಪ್ ವ್ಯಾಪಕ ಚರ್ಚೆಗೆ ಒಳಗಾಗಿರುವಂತೆಯೇ ಇತ್ತ ಸ್ವದೇಶೀ ನಿರ್ಮಾಣದ ವಾಟ್ಸ್ಆಪ್ ರೀತಿಯದ್ದೇ ಆದ ಮೆಸೇಜಿಂಗ್ ಅಪ್ಲಿಕೇಶನ್ ಹೊರತರಲು ಭಾರತೀಯ ಸಾಫ್ಟ್ವೇರ್ ಕಂಪೆನಿಯೊಂದು ಸಿದ್ದತೆ ನಡೆಸಿದೆ.
ಅರಟ್ಟೈ ಹೆಸರಿನ ಈ ಆಪ್ನ್ನು ಜೊಹೊ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಇನ್ನು ಕೆಲವೇ ದಿನಗಳಲ್ಲಿ ಇದು ಬಳಕೆಗೆ ಸಿಗಲಿದೆ.
ಸದ್ಯ ಈ ಅಪ್ಲಿಕೇಶನ್ ಜೊಹೊ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಮಾತ್ರ ಬೀಟಾ ಅಡಿಯಲ್ಲಿ ಕೆಲವು ವಾರಗಳ ಹಿಂದೆ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದೆ. ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಪ್ಲೇ ಸ್ಟೋರ್ಗಳಲ್ಲಿ ಬಿಡುಗಡೆ ಮಾಡಿದೆಯಾದರೂ ಇದು ಆಲ್ಫಾ ವರ್ಷನ್ ಅಲ್ಲ.
ಇದರ ಬಗ್ಗೆ ಸಂಸ್ಥೆಯ ಸಿಇಒ ಶ್ರೀಧರ್ ವೆಂಬು ಟ್ವೀಟ್ ಮಾಡಿದ್ದು, ನಮ್ಮ ಅರಟ್ಟೈ ತಂಡವು ಈ ಅಪ್ಲಿಕೇಶನ್ನ ಬಗ್ಗೆ ಇನ್ನೂ ಏನೂ ಹೇಳಿಕೆ ನೀಡದಂತೆ ಕೇಳಿದೆ. ಆದರೆ ಇದರ ಬಗ್ಗೆ ಈಗಾಗಲೇ ಎಲ್ಲಾ ಕಡೆ ಚರ್ಚೆ ನಡೆಯುತ್ತಿರುವುದರಿಂದ ನಾನು ಕೂಡ ಇದರ ಬಗ್ಗೆ ವಿಷಯ ತಿಳಿಸಲು ಮುಂದಾದ್ದೇನೆ. ಅರಟ್ಟೈ ಅಪ್ಲಿಕೇಶನ್ ಅನ್ನು ಶೀಘ್ರವೇ ಪ್ಲೇ ಸ್ಟೋರ್ನಲ್ಲಿ ಪರಿಚಯಿಸಲಿದ್ದೇವೆ. ಇದು ಕೆಲವು ವಾರಗಳಲ್ಲಿ ಅಧಿಕೃತವಾಗಲಿದೆ ಎಂದು ತಿಳಿಸಿದ್ದಾರೆ.
ಚೆನ್ನೈನ ಕಂಪನಿ
ಜೊಹೊ ಕಾರ್ಪೊರೇಷನ್ ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದೆ. ಇದರ ಪ್ರಧಾನ ಕಚೇರಿ ಚೆನ್ನೈನಲ್ಲಿದೆ. ಅರಟ್ಟೈ ಎಂದರೆ ತಮಿಳಿನಲ್ಲಿ ಚಿಟ್-ಚಾಟ್ ಎಂದು ಅರ್ಥ. ಈ ಅಪ್ಲಿಕೇಶನ್ ಯಾವೆಲ್ಲಾ ಫೀಚರ್ಸ್ಗಳನ್ನ ಹೊಂದಿದೆ, ಹೇಗಿರಲಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ವಾಟ್ಸ್ಆಪ್ ಭಾರತದಲ್ಲಿ ಅತಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಇದರ ನಡುವೆ ಈ ಸ್ವದೇಶಿ ಅಪ್ಲಿಕೇಶನ್ ಭಾರತದಲ್ಲಿ ಯುಶಸ್ವಿಯಾದರೆ ಈಗಲೇ ಸಂಕಷ್ಟದಲ್ಲಿರುವ ಅದಕ್ಕೆ ಇನ್ನಷ್ಟು ಹೊಡೆತ ಬೀಳುವುದು ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ.