ಪುತ್ತೂರು: ವಾರದ ಹಿಂದೆ ಪುತ್ತೂರಿನ ನೆಹರು ನಗರದಿಂದ ಕಾಣೆಯಾಗಿದ್ದ ಫೈರೋಜ್ ಆಲಿ(9) ಎಂಬ ಬಾಲಕ ಹಾಸನದಲ್ಲಿ ಸುರಕ್ಷಿತವಾಗಿ ಪತ್ತೆಯಾಗುವ ಮೂಲಕ ಪ್ರಕರಣ ಸುಖ್ಯಾಂತ್ಯಗೊಂಡಿದೆ.
ಫೈರೋಜ್ ಅ. 9 ರಂದು ಇದಕ್ಕಿದಂತೆ ನಾಪತ್ತೆಯಾಗಿ ಅತಂಕಕ್ಕೆ ಕಾರಣವಾಗಿತ್ತು. ಆತನ ಅಪಹರಣವಾಗಿರಬಹುದು ಎಂಬ ಶಂಕೆಯೂ ಮನೆಯವರಿಂದ ವ್ಯಕ್ತವಾಗಿ ಈ ಕುರಿತು ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ನೆಹರೂ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ, ಈ ಹಿಂದೆ ಹಾಸನದ ಅರಸಿಕೇರೆಯಲ್ಲಿ ವಾಸಿಸುತ್ತಿದ್ದ ಹಸೀನಾ ಕೆ.ಇ. ಎಂಬವರ ಪುತ್ರ ಫೈರೋಜ್ಗೆ ಮತ್ತೆ ಅರಸಿಕೇರೆಯ ನೆನಪು ಮರುಕಳಿಸಿ ಮನೆಯಲ್ಲಿ ಹೇಳದೆ ತೆರಳಿದ್ದ.
ನಗರದಿಂದ ಬಿ.ಸಿ. ರೋಡಿಗೆ ಬಸ್ಸಿನಲ್ಲಿ ಹೋದ ಬಾಲಕ ಅಲ್ಲಿ ಹಾಸನ ಬಸ್ಸು ಹತ್ತಿದ್ದಾನೆ. ಬಿ ಸಿ. ರೋಡಿನಲ್ಲಿ ಸಿಕ್ಕಿದ ಅಜ್ಜಿಯೊಬ್ಬರಲ್ಲಿ ತನ್ನ ಮನೆ ಅರಸಿಕೆರೆ, ಅಲ್ಲಿಗೆ ಹೋಗಲು ತನ್ನಲ್ಲಿ ಹಣವಿಲ್ಲ ಎಂದು ತಿಳಿಸಿದಾಗ ಮರುಕಪಟ್ಟ ಮಹಿಳೆ ಈ ಬಾಲಕನ ಬಸ್ಸು ಟಿಕೇಟ್ ಖರೀದಿಸಿರುವುದಾಗಿ ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಹಾಸನ ತಲುಪಿದ ಬಾಲಕ ಅಲ್ಲಿಂದ ಅರಸಿಕೆರೆಗೆ ಹೋಗಲು ದಾರಿ ಕಾಣದೇ ಒದ್ದಾಟ ನಡೆಸುತ್ತಿರುವಾಗ ಮಕ್ಕಳ ರಕ್ಷಣೆಯ ಹೊತ್ತಿರುವ ಚೈಲ್ಡ್ಲೈನಿನ ಸಿಬಂದಿಗಳಿಗೆ ಸಿಕ್ಕಿದ್ದು ಅವರು ಅತನನ್ನು ಹಾಸನದ ಬಾಲ ಮಂದಿರದಲ್ಲಿ ಆಶ್ರಯ ನೀಡಿದ್ದರು.
ಬಳಿಕ ಅಲ್ಲಿನ ಸಿಡಿಪಿಒ ಬಾಲಕನಲ್ಲಿ ಆತನ ವಿಳಾಸ ವಿಚಾರಿಸಿ, ಅವನು ನೀಡಿದ ಮಾಹಿತಿಯಂತೆ ಪುತ್ತೂರಿನ ಮಹಿಳಾ ಠಾಣೆಗೆ ತಿಳಿಸಿದ್ದಾರೆ. ಬಾಲಕನ ತಾಯಿ ಹಸೀನಾ ಕೆ. ಹಾಗೂ ಪುತ್ತೂರು ಠಾಣೆಯ ಮುಖ್ಯ ಆರಕ್ಷಕರಾದ ದಿನೇಶ್ ಹಾಗೂ ಕುಸುಮಾಧ ಅವರು ಹಾಸನಕ್ಕೆ ತೆರಳಿ ಅ. 15 ರಂದು ಬಾಲಕನನ್ನು ಕರೆದುಕೊಂಡು ಬಂದಿದ್ದರು. ಬಳಿಕ ಹೆತ್ತವರ ಜೊತೆ ಬಾಲಕನನ್ನು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.