Wednesday, June 29, 2022

Latest Posts

ವಾರಾಂತ್ಯದ ರಜೆ, ದೀಪಾವಳಿ ಹಬ್ಬ… ಪ್ರವಾಸಿಗರಿಂದ ತುಂಬಿ ತುಳುಕಿತು ಗಿರಿಶ್ರೇಣಿಯ ಪ್ರವಾಸಿ ತಾಣಗಳು!

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ವಾರಾಂತ್ಯದ ರಜೆ ದಿನದಲ್ಲೇ ದೀಪಾವಳಿ ಹಬ್ಬವೂ ಬಂದ ಹಿನ್ನೆಲೆಯಲ್ಲಿ ಭಾನುವಾರ ಗಿರಿಶ್ರೇಣಿಯ ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕಿತು.
ಕೊರೋನಾ ನಿರ್ಬಂಧದ ಹಿನ್ನೆಲೆಯಲ್ಲಿ ದೇವೀರಮ್ಮ ಬೆಟ್ಟ ಏರಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಭಾನುವಾರೂ ಬೆಟ್ಟಕ್ಕೆಂದು ಬಂದ ಪ್ರವಾಸಿಗರೆಲ್ಲರೂ ಮುಳ್ಯಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ತಪ್ಪಲಿನ ನಿಸರ್ಗತಾಣಕ್ಕೆ ಭೇಟಿ ನೀಡಿದರು.
ಶನಿವಾರ ಗಿರಿ ಪ್ರದೇಶದಲ್ಲಿದ್ದ ಬಿಸಿಲು ತಂಗಾಳಿಯ ಆಹ್ಲಾದಕರ ವಾತಾವರಣ ಭಾನುವಾರ ಇರಲಿಲ್ಲ. ಬೆಳಗಿನಿಂದ ಸಂಜೆ ವರೆಗೆ ಪರಸ್ಪರ ಮುಖ ಕಾಣದಷ್ಟು ಪ್ರಮಾಣದ ಮಂಜು ಕವಿದಿತ್ತು. ಆಗಾ ಬೀಸುತ್ತಿದ್ದ ಶೀತಗಾಳಿ ಮೈಕೊರೆಯುತ್ತಿತ್ತು. ಅಪರೂಪಕ್ಕೊಮ್ಮೆ ಸಿಗುವ ಇಂತಹ ವಾತಾವರಣದಲ್ಲಿ ಪ್ರವಾಸಿಗರು ಸೆಲ್ಫಿಗಳನ್ನು ತೆಗೆದುಕೊಂಡು ಸಂತಸ ಹಂಚಿಕೊಂಡರು.
ಬೆಳಗ್ಗೆ 9 ಗಂಟೆ ವೇಳೆಗೆಲ್ಲಾ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೂರಾರು ವಾಹನಗಳನ್ನು ಕಿಲೋಮೀಟರ್ ದೂರದಲ್ಲೇ ಪಾರ್ಕ್ ಮಾಡಿ ಪ್ರವಾಸಿಗರು ಗಿರಿಯನ್ನೇರಿ ವಾಪಾಸಾದರು.
ಅಲ್ಲಿಂದ ದತ್ತಪೀಠ, ಮಾಣಿಕ್ಯಾಧಾರ, ಗಾಳಿಕೆರೆ, ಕವಿಕಲ್‍ಗಂಡಿ ಇನ್ನಿತರೆ ಪ್ರದೇಶಗಳಿಗೆ ಭೇಟಿ ನೀಡಿದರು. ಕೊರೋನಾ ಕಾರಣಕ್ಕೆ ಏಳೆಂಟು ತಿಂಗಳು ಅತಿಥಿಗಳಿಲ್ಲದೆ ಸೊರಗಿದ್ದ ಹೋಂಸ್ಟೇಗಳು, ಲಾಡ್ಜ್‍ಗಳು, ರೆಸಾರ್ಟ್‍ಗಳಲ್ಲಿ ಒಂದಷ್ಟು ಪ್ರವಾಸಿಗರು ತಂಗಿದ್ದರು.
ಈ ಬಾರಿ ಗಿರಿ ಭಾಗದಲ್ಲಿ ಉತ್ತಮ ಪ್ರಮಾಣದ ಮಳೆಯಾಗಿರುವ ಹಿನ್ನೆಲೆಯಲ್ಲಿ ಇಡೀ ವಾತಾವರಣ ತಂಪಾಗಿರುವುದಲ್ಲದೇ ಹಸಿರಿನಿಂದ ನಳನಳಿಸುತ್ತಿರುವುದು ಹಾಗೂ ಮೈದುಂಬಿಕೊಂಡಿರುವ ಝರಿ-ತೊರೆ, ಜಲಪಾತಗಳು ಪ್ರವಾಸಿಗರನ್ನು ಪುಳಕಿತಗೊಳಿಸಿತು.
ಬಿಂಡಿಗದ ದೇವೀರಮ್ಮ ಬೆಟ್ಟವನ್ನು ಹತ್ತಿ ಸುತ್ತಲ ಪ್ರವಾಸಿ ತಾಣಕ್ಕೆ ಭೇಟಿ ನೀಡಲೆಂದು ಶುಕ್ರವಾರ ರಾತ್ರಿಯೇ ಬಂದು ತಂಗಿದ್ದೆವು. ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಬೆಟ್ಟ ಏರಲು ಅವಕಾಶ ಸಿಗದ ಕಾರಣ ಬೆಟ್ಟದ ಕೆಳಭಾದಲ್ಲಿರುವ ದೇವೀರಮ್ಮನವರ ದರ್ಶನ ಪಡೆದು ಗಿರಿ ತಪ್ಪಲಿನ ತಾಣಗಳನ್ನು ವೀಕ್ಷಿಸಿದೆವು ಬಹುತೇಕರು ಹೇಳಿದರು.
ಇದಲ್ಲದೆ ಜಿಲ್ಲೆಯ ಇತರೆ ಧಾರ್ಮಿಕ ಸ್ಥಳಗಳಾದ ಶೃಂಗೇರಿಯ ಶಾರದಾಪೀಠ, ಕಳಸದ ಕಳಸೇಶ್ವರ ದೇವಾಲಯ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಬೆಳವಾಡಿಯ ವೀರನಾರಾಯಣ ಸ್ವಾಮಿ, ತರೀಕೆರೆ ಅಮೃತಾಪುರ ದೇವಸ್ಥಾನ ಸೇರಿದಂತೆ ಹಲವು ಕ್ಷೇತ್ರಗಳಿಗೂ ಭಕ್ತರು ಭೇಟಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss