Tuesday, July 5, 2022

Latest Posts

ವಾರಾಹಿ ನೀರಾವರಿ ಯೋಜನೆಯೇ ಮುಗಿದಿಲ್ಲ; ಆಗಲೇ ಕೆರೆ ತುಂಬಿಸುವ ಮತ್ತೊಂದು ಯೋಚನೆ

ಉಡುಪಿ: ಕಳೆದ ನಾಲ್ಕು ದಶಕಗಳಿಂದ ವಾರಾಹಿ ನೀರಾವರಿ ಯೋಜನೆ ಇನ್ನೂ ದಡ ತಲುಪಿಲ್ಲ. ಅದಕ್ಕೂ ಮುನ್ನ ಇದೀಗ ಹೊಸದಾಗಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಇಂಬು ಸಿಕ್ಕಿದೆ. ರಾಜ್ಯ ಸರ್ಕಾರ ಕಾರ್ಯ ಸಾಧ್ಯತಾ ವರದಿ ಸಿದ್ಧಪಡಿಸಲು 25 ಲಕ್ಷ ರೂ. ಮಂಜೂರು ಮಾಡಿದೆ.

ಕರ್ನಾಟಕ ನೀರಾವರಿ ನಿಗಮವು 2019-20ನೇ ಸಾಲಿನಲ್ಲಿ ವಾರಾಹಿಯಿಂದ ವರುಣತೀರ್ಥ ಕೆರೆ ತುಂಬಿಸುವ ಯೋಜನೆಯ ಸಾಧ್ಯತಾ ವರದಿಗೆ ಅನುದಾನ ಬಿಡುಗಡೆ ಮಾಡಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸರ್ವೆ ನಡೆಸಿ, ವರದಿ ಸಿದ್ಧಪಡಿಸುವುದಕ್ಕೆ ಶಿವಮೊಗ್ಗ ತುಂಗಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರ್‌ಗೆ ಪತ್ರ ಬರೆದು ಕ್ರಮ ಕೈಗೊಳ್ಳುವುದಕ್ಕೆ ಆದೇಶಿಸಿದ್ದಾರೆ.

ತೆಕ್ಕಟ್ಟೆ ಮಲ್ಯಾಡಿಯಿಂದ ಯೋಜನೆ: ವಾರಾಹಿ ಎಡದಂಡೆ ಯೋಜನೆಯ 44 ಕಿ.ಮೀ. ಮುಕ್ತಾಯಗೊಳ್ಳುವುದು ತೆಕ್ಕಟ್ಟೆ ಸಮೀಪದ ಮಲ್ಯಾಡಿಯಲ್ಲಿ. ಯೋಜನೆಯ ಕೊನೆಯ ಸ್ಥಳದಲ್ಲಿ ಮಲ್ಯಾಡಿ ಕೆರೆ ಇದೆ. ಅಲ್ಲಿಯವರೆಗೆ ವಾರಾಹಿ ನದಿಯ ನೀರು ಕಾಲುವೆಯಲ್ಲಿ ಹರಿದ ಬಳಿಕ ಅಲ್ಲಿಂದ ಕೆರೆ ತುಂಬಿಸುವ ಯೋಜನೆ ಆರಂಭವಾಗಬೇಕಿದೆ. ಕೆರೆ ತುಂಬಿಸುವ ಯೋಜನೆ ಏತ ನೀರಾವರಿ ಯೋಜನೆಯಾಗಿರಲಿದೆ. ವರುಣತೀರ್ಥ ಕೆರೆಯು ಮಲ್ಯಾಡಿಯಿಂದ 4-5 ಕಿ.ಮೀ. ದೂರದಲ್ಲಿದೆ.

ರಾ.ಹೆ. 66ರ ಪಶ್ಚಿಮ ಭಾಗಕ್ಕೆ ನೀರು:

ಸರ್ವಋತು ನದಿಯಾಗಿರುವ ವಾರಾಹಿ ನದಿಯ ಯೋಜನೆಯಿಂದ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವ ಬದಿಯ ಪ್ರದೇಶಗಳಿಗೆ ನೀರು ಹರಿಯುತ್ತದೆ. ಆದರೆ ಪಶ್ಚಿಮ ಭಾಗಕ್ಕೆ ಈ ಯೋಜನೆಯ ಪ್ರಯೋಜನ ಲಭಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕೋಟದ ವರುಣತೀರ್ಥ ಕೆರೆ, ಕೋಟೇಶ್ವರದ ದೊಡ್ಡ ಕೊಳ, ಯಡ್ತಾಡಿ, ಕಾವಾಡಿ ತೋಡುಗಳು ಸಹಿತ ಇನ್ನಷ್ಟು ಕೆರೆ, ಮದಗಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಲಾಗಿತ್ತು.

ಸರ್ಕಾರವು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕೋರಿಕೆಯನ್ನು ಪುರಸ್ಕರಿಸಿದ್ದು, ಕೆಲವೇ ತಿಂಗಳುಗಳಲ್ಲಿ ಕಾರ್ಯ ಸಾಧ್ಯತಾ ವರದಿ ಸಿದ್ಧಗೊಳ್ಳಲಿದೆ. ಇದರಿಂದ ಕನಿಷ್ಠ 14-15 ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆ, ಮದಗಗಳಿಗೆ ಪ್ರಯೋಜನವಾಗಬಹುದು ಎಂದು ಅಂದಾಜಿಸಲಾಗಿದೆ.

ಕೆರೆ ತುಂಬಿಸುವ ಯೋಜನೆಗೆ ಕೋರಿದ್ದೆ

ವಾರಾಹಿ ಯೋಜನೆಯಲ್ಲಿ ಕಾಲುವೆಯ ಮೂಲಕ ನೀರು ಹರಿಸಲಾಗುತ್ತಿದೆ. ಉಳಿದ ನೀರನ್ನು ಬಳಕೆ ಮಾಡುವುದಕ್ಕೆ ಕೋಟ ವರುಣತೀರ್ಥ ಕೆರೆಯ ಸಹಿತ ಸುತ್ತಮುತ್ತಲ ಕೆರೆಗಳನ್ನು ತುಂಬಿಸುವುದಕ್ಕಾಗಿ ಯೋಜನೆ ರೂಪಿಸಿ, ವಿವರವಾದ ವರದಿ ತಯಾರಿಸಲು ಕೋರಲಾಗಿತ್ತು. ಇದಕ್ಕೆ ರಾಜ್ಯ ಸರ್ಕಾರ ಈಗಾಗಲೇ 25 ಲಕ್ಷ ರೂ. ಮಂಜೂರು ಮಾಡಿದೆ. ಪ್ರಥಮ ಹಂತದಲ್ಲಿ ಕೋಟ ಆಸುಪಾಸಿನ ವಿವಿಧ ಪಂಚಾಯತ್‌ ಗಳ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಲಾಗಿದೆ. ಇನ್ನು ಕಾರ್ಯ ಸಾಧ್ಯತಾ ವರದಿ ಸಿದ್ಧಗೊಳ್ಳಬೇಕಿದೆ.

-ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ, ಮೀನುಗಾರಿಕೆ ಸಚಿವ

3 ತಿಂಗಳಲ್ಲಿ ಕಾರ್ಯ ಸಾಧ್ಯತಾ ವರದಿ

ವಾರಾಹಿ ಯೋಜನೆಯ ಎಡದಂಡೆ ಕಾಲುವೆಯ 44 ಕಿ.ಮೀ.ಯಲ್ಲಿ ಪ್ರಸ್ತುತ 30 ಕಿ.ಮೀ. ಪೂರ್ಣಗೊಂಡಿದೆ. ಎಂಟು ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ 6 ಕಿ.ಮೀ. ಕಾಲುವೆಗೆ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅದು ಮುಕ್ತಾಯಗೊಂಡ ಬಳಿಕವೇ ವಾರಾಹಿ ಕೆರೆ ತುಂಬಿಸುವ ಯೋಜನೆ ಆರಂಭವಾಗಬೇಕಿದೆ. ಮಾರ್ಚ್ ಮಧ್ಯದಲ್ಲಿ ಕಾರ್ಯ ಸಾಧ್ಯತಾ ವರದಿ ಸಿದ್ಧಪಡಿಸಲು ಸರ್ವೆಗೆ ಏಜೆನ್ಸಿ ನಿಗದಿಗೊಳಿಸಿ, ನಂತರದ 2 ತಿಂಗಳಲ್ಲಿ ಸರ್ವೆ ಪೂರ್ಣಗೊಳ್ಳಬೇಕಿದೆ.

–  ಪ್ರವೀಣ್, ಕಾರ್ಯಪಾಲಕ ಇಂಜಿನಿಯರ್, ವಾರಾಹಿ ನೀರಾವರಿ ಯೋಜನೆ ಸಿದ್ದಾಪುರ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss