Tuesday, July 5, 2022

Latest Posts

ವಾಲ್ಮೀಕಿ ಗುರುಪೀಠದ ಅಭಿವೃದ್ಧಿಗೆ 5.4 ಕೋಟಿ ರೂ. ಬಿಡುಗಡೆ: ಮುಖ್ಯಮಂತ್ರಿ ಯಡಿಯೂರಪ್ಪ

ಹೊಸ ದಿಗಂತ ವರದಿ, ದಾವಣಗೆರೆ:

ನಾಯಕ ಸಮುದಾಯದ ಆರ್ಥಿಕ ಸ್ವಾವಲಂಬನೆಗೆ ಬದ್ಧವಾಗಿರುವ ರಾಜ್ಯ ಸರ್ಕಾರ ವಾಲ್ಮೀಕಿ ಗುರುಪೀಠದ ಅಭಿವೃದ್ಧಿಗೆ ಪ್ರಸಕ್ತ
ಸಾಲಿನಲ್ಲಿ 10.8 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಈಗಾಗಲೇ 5.4 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಜಿಲ್ಲೆಯ ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹರ್ಷಿ ಮಹೋತ್ಸವದ ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮವನ್ನು ಸ್ಥಾಪನೆ 

ನಾಯಕ ಸಮುದಾಯದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದುವರೆಯಲು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಸಮಾಜದ ಗುರುಪೀಠ ಹಾಗೂ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವಜನರ ಅಭಿವೃದ್ಧಿಗಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ವಾಲ್ಮೀಕಿಯವರ ಕೊಡುಗೆ ಅಪಾರ
ಮಹರ್ಷಿ ವಾಲ್ಮೀಕಿ ಜಾಗತಿಕ ಚರಿತ್ರೆಯ ಧೃವತಾರೆ. ಭಾರತೀಯ ಸಂಸ್ಕೃತಿಯಲ್ಲಿ ವಾಲ್ಮೀಕಿಯವರ ಕೊಡುಗೆ ಅಪಾರ. ಆಧ್ಯಾತ್ಮಿಕ ಚಿಂತಕ, ಶಿಕ್ಷಣ ತಜ್ಞ, ರಾಜನೀತಿ ತಜ್ಞ, ತತ್ವಜ್ಞಾನಿಯಾದ ವಾಲ್ಮೀಕಿ ಜನಮಾನಸದಲ್ಲಿ ಇಂದಿಗೂ ಇದ್ದಾರೆ. ಜಗತ್ತಿಗೆ ರಾಮಾಯಣ ಕೊಟ್ಟ ಶ್ರೇಷ್ಠ ದಾರ್ಶನಿಕ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಸಾಮಾಜಿಕ ಮೌಲ್ಯಗಳನ್ನು ರಾಮಾಯಣದಲ್ಲಿ ಪ್ರತಿಪಾದಿಸುವ ಮೂಲಕ ಸರ್ವರಿಗೂ ಸಮಪಾಲು-ಸಮಬಾಳು ಎನ್ನುತ್ತಾ ಸಮಾನ ಅವಕಾಶಗಳನ್ನು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ ಎಂದು ಅವರು ಬಣ್ಣಿಸಿದರು.
ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಕಾಯಕ್ರಮದ ಸಾನಿಧ್ಯ ವಹಿಸಿದ್ದರು. ಜಲಸಂಪನ್ಮೂಲ ಸಚಿವ ಹಾಗೂ ಮಹರ್ಷಿ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ರಮೇಶ್ ಜಾರಕಿಹೊಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ವಿ.ರಾಮಚಂದ್ರ, ಸತೀಶ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ, ಡಾ.ಯತೀಂದ್ರ, ಚಿಕ್ಕಮಾದು, ರಾಜವೆಂಕಟಪ್ಪ ನಾಯಕ, ನರಸಿಂಹ ನಾಯಕ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಾಲ್ಮೀಕಿ ವಿಜಯ ಸ್ಮರಣ ಸಂಪುಟ ಸಂಪಾದಕ ಡಾ.ಎ.ಬಿ.ರಾಮಚಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss