ಹೊಸ ದಿಗಂತ ವರದಿ, ಕಾಸರಗೋಡು:
ಕೇರಳದಲ್ಲಿ ವಾಹನಗಳ ಹೊಗೆ ಪರೀಕ್ಷಾ ಪ್ರಮಾಣಪತ್ರ ಹೊಂದದಿರುವವರಿಗೆ ವಿಧಿಸಲಾಗುವ ದಂಡವನ್ನು ದ್ವಿಗುಣಗೊಳಿಸಲಾಗಿದೆ. ಅದರಂತೆ ದಂಡ ಮೊತ್ತವನ್ನು 2000 ರೂಪಾಯಿಗೆ ಏರಿಸಲು ನಿರ್ಧರಿಸಲಾಗಿದೆ.
ವಾಹನ ಸಂಬಂಧಿತ ಎಲ್ಲ ದಾಖಲೆಗಳು ಮತ್ತು ಹೊಗೆ ಪರೀಕ್ಷಾ ಪ್ರಮಾಣಪತ್ರವು ಈಗ ಒಂದೇ ಕ್ಲಿಕ್ನಲ್ಲಿ ಮೋಟಾರು ವಾಹನ ಇಲಾಖೆಗೆ ಲಭ್ಯವಾಗುತ್ತದೆ. ವಾಹನ ಸಾಫ್ಟ್ವೇರ್ ವಿವಿಧ ಹೊಗೆ ಪರೀಕ್ಷಾ ಕೇಂದ್ರಗಳನ್ನು ಸಹ ಸಂಪರ್ಕಿಸುತ್ತದೆ ಎಂಬುದು ವಿಶೇಷತೆಯಾಗಿದೆ.
ವಾಹನಗಳ ಹೊಗೆ ಪರೀಕ್ಷೆ ಪೂರ್ಣಗೊಂಡ ಕೂಡಲೇ ಎಲ್ಲ ಮಾಹಿತಿಗಳು ಮೋಟಾರು ವಾಹನ ಇಲಾಖೆಗೆ ದೊರಕಲಿವೆ. ನೋಂದಣಿ ಸಂಖ್ಯೆಯೊಂದಿಗೆ, ವಾಹನ, ಹೊಗೆ ಪರೀಕ್ಷೆ , ವಿಮೆ ಮತ್ತು ರಸ್ತೆ ತೆರಿಗೆಯಂತಹ ಎಲ್ಲ ಮಾಹಿತಿಗಳನ್ನು ಒಂದೇ ಕ್ಲಿಕ್ನಲ್ಲಿ ಪಡೆಯಬಹುದು. ಹೊಸ ವಾಹನಗಳಿಗೆ ಒಂದು ವರ್ಷದ ಹೊಗೆ ಪರೀಕ್ಷಾ ಪ್ರಮಾಣಪತ್ರ ಕಡ್ಡಾಯವಾಗಿದೆ. ಬಿಎಸ್ 3 ಮತ್ತು ಬಿಎಸ್ 2 ವಾಹನಗಳಿಗೆ ಆರು ತಿಂಗಳ ಪ್ರಮಾಣಪತ್ರ ನೀಡಲಾಗುತ್ತದೆ.
ತಪಾಸಣೆ ಕೇಂದ್ರಗಳ ಹೆಸರಿನಲ್ಲಿ ನೀಡಲಾದ ಪ್ರಮಾಣಪತ್ರಗಳನ್ನು ಈಗ ಮೋಟಾರು ವಾಹನ ಇಲಾಖೆಗೆ ನೀಡಲಾಗುವುದು. ಪರೀಕ್ಷಾ ಫಲಿತಾಂಶವು ವಾಹನದ ಆನ್ ಲೈನ್ ನೋಂದಣಿ ಮಾಹಿತಿಯೊಂದಿಗೆ ಲಭ್ಯವಿರುತ್ತದೆ. ಆರ್ ಸಿ ಪುಸ್ತಕ ಅಥವಾ ವಿಮಾ ಪ್ರಮಾಣಪತ್ರವನ್ನು ಮರೆತುಬಿಡುವುದು ಇನ್ನು ಮುಂದೆ ಸಮಸ್ಯೆಯಲ್ಲ. ಏಕೆಂದರೆ ವಾಹನದ ಎಲ್ಲ ವಿವರಗಳು ಸಾರಿಗೆ ಪೋರ್ಟಲ್ನಲ್ಲಿ ಲಭ್ಯವಿರುತ್ತವೆ.
ಎರ್ನಾಕುಳಂನಲ್ಲಿ ಈಗಾಗಲೇ ಸುಮಾರು 10 ಹೊಗೆ ಪರೀಕ್ಷಾ ಕೇಂದ್ರಗಳಿಗೆ ಸಂಪರ್ಕಿಸಲಾಗಿದೆ. ಹೊಸ ವ್ಯವಸ್ಥೆಯು ವಾಹನ ಮಾಲೀಕರು ಮತ್ತು ಮೋಟಾರು ವಾಹನ ಪರಿಶೀಲನೆಗೆ ನಿಯೋಜಿಸಲಾಗುವ ಅಧಿಕಾರಿಗಳಿಗೆ ಸಹಾಯಕವಾಗಲಿದೆ.