ಹೊಸ ದಿಗಂತ ವರದಿ, ಕಾಸರಗೋಡು:
ಮುಂದಿನ ಕೇರಳ ವಿಧಾನಸಭಾ ಚುನಾವಣೆಯಲ್ಲಿ ವಿಕಲಚೇತನರು ಹಾಗೂ 80 ವರ್ಷ ದಾಟಿದವರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯಿದೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗವು ರೂಪುರೇಷೆ ಸಿದ್ಧಪಡಿಸಿದೆ.
ವಿಕಲಚೇತನರಿಗೂ, 80 ವರ್ಷ ದಾಟಿದವರಿಗೂ ಪೋಸ್ಟಲ್ ಬ್ಯಾಲೆಟ್ ಒದಗಿಸಲಾಗುವುದು. ಇದರಂತೆ ವಿಕಲಚೇತನರ ಹಾಗೂ 80 ವರ್ಷ ದಾಟಿದವರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಬೂತ್ ಲೆವೆಲ್ ಆಫೀಸರ್ (ಬಿಎಲ್ಒ) ಗಳಿಗೆ ಇದರ ಹೊಣೆಗಾರಿಕೆ ನೀಡಲಾಗುತ್ತಿದೆ. ಕೋವಿಡ್ ಬಾಧಿತರಿಗೂ, ಕೋವಿಡ್ ರೋಗವಿದೆಯೆಂದು ಶಂಕೆಯುಳ್ಳವರಿಗೂ ಈ ಸೌಲಭ್ಯವಿದೆ. ಮತದಾರರು ಇದಕ್ಕಾಗಿ ಅರ್ಜಿ ಸಲ್ಲಿಸಬೇಕು. ಭರ್ತಿಗೊಳಿಸಿ ನೀಡಿದ ಅರ್ಜಿಯನ್ನು ಬಿಎಲ್ಒಗಳು ಸಂಗ್ರಹಿಸಿ ಬ್ಯಾಲೆಟ್ ಪೇಪರ್ ಒದಗಿಸುವರು ಎಂದು ಚುನಾವಣಾ ಆಯೋಗವು ತಿಳಿಸಿದೆ.