ವಿಕ್ಟೋರಿಯಾ ಈಗ ಕೋವಿಡ್-19 ಆಸ್ಪತ್ರೆ

0
64

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವು ದರಿಂದ ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗಿದೆ ಎಂದು ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾಜಿಲ್ಲೆಗಳಲ್ಲೂ ಒಂದೊಂದು ಪ್ರತ್ಯೇಕ ಆಸ್ಪತ್ರೆ ತೆರೆಯುವ ಚಿಂತನೆ ನಡೆಸಲಾಗಿದೆ. ಮೂಲಕ ಸೌಕರ್ಯಗಳ ಪರಿಶೀಲನೆಗಾಗಿ ಮಂಗಳವಾರದಿಂದ ರಾಜ್ಯ ಪ್ರವಾಸ ಕೈಗೊಳ್ಳಲಾಗುತ್ತಿದೆ  ಎಂದರು.

ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ತೀರಾ ಅಗತ್ಯ. ಹೀಗಾಗಿ ಒಂದು ಸಾವಿರ ವೆಂಟಿಲೇಟರ್‌ಗಳು, 10 ಲಕ್ಷ ಎನ್95 ಮಾಸ್ಕ್‌ಗಳು, 15ಲಕ್ಷ  ತ್ರಿಬಲ್‌ಲೇಯರ್ ಮಾಸ್ಕ್‌ಗಳು, 5 ಲಕ್ಷ
ಪಿಪಿಇ ಕಿಟ್,ಸ್ಯಾನಿಟೈಸರ್ ಖರೀದಿಸಲಾಗುತ್ತದೆ. ಇದಕ್ಕಾಗಿ ಮೈಸೂರಿನ  ಸ್ಕ್ಯಾನ್‌ರೇ ಕಂಪೆನಿ ಜೊತೆ ಮಾತುಕತೆ ನಡೆಸಲಾಗಿದೆ ಎಂದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗೆ ಅಗತ್ಯ ಪರಿಕರಗಳನ್ನು ಒದಗಿಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಧಿಕಾರಿ, ವೆಂಟಿಲೇಟರ್ ಸಪ್ಲೆಯರ್ ಜೊತೆ ವೀಡಿಯೋ ಕಾಸ್ಫರೆನ್ಸ್ ಮೂಲಕ ರೋಗ ನಿಯಂತ್ರಣ ಹಾಗೂ ಚಿಕಿತ್ಸೆಗೆ ಅಗತ್ಯ ಇರುವ ಉಪಕರಣಗಳ ಖರೀದಿ ಹಾಗೂ ಸಂಗ್ರಹ ಪ್ರಕ್ರಿಯೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಅದರಂತೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ಚೀನಾದಲ್ಲಿ ಈಗ ಪರಿಸ್ಥಿತಿ ಸುಧಾರಿಸಿದ್ದು, ಅಲ್ಲಿಂದ ಅಗತ್ಯ ವಸ್ತುಗಳ ಆಮದು ಸಾಧ್ಯವಾಗಬಹುದು. ಅದೇ ರೀತಿ ಥೈವಾನ್, ದಕ್ಷಿಣ ಕೊರಿಯಾ ಸೇರಿದಂತೆ ಅಂತಾರಾಷ್ಟ್ರೀಯ ಪೂರೈಕೆದಾರರು ಹಾಗೂ ವ್ಯಾಪಾರಿಗಳಿಂದ ಖರೀದಿ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆ ಇದೆ. ನಮ್ಮ ಬೇಡಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ ವೈದ್ಯಕೀಯ ಸಲಕರಣೆಗಳು ಎಷ್ಟು ಬೇಕು ಎಂದು ನಿರ್ದಿಷ್ಟ ಸಂಖ್ಯೆ ಹೇಳಲಾಗದು. ಅಗತ್ಯಕ್ಕೆ ಅನುಗುಣವಾಗಿ ಖರೀದಿ ಆದೇಶ ಮಾಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಸಂಪೂರ್ಣ ಸಾರ್ವಜನಿಕರ ಜೀವನ ಸ್ತಬ್ಧಗೊಳಿಸಲಿಲ್ಲ. ಸಾಧ್ಯವಾದ ಮಟ್ಟಿಗೆ ಹೊರಗಿನ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ ಎಂದರು.

ಬ್ರಾಡ್ ಬ್ಯಾಂಡ್ ವೇಗ ಹೆಚ್ಚಳ: ಐಟಿ ಕಂಪೆನಿಗಳ ಶೇ.80ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ವರ್ಕ್ ಫ್ರಮ್ ಹೋಮ, ಪಾಳಿ ಹಾಗೂ ಬದಲಿ ವ್ಯವಸ್ಥೆ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಇಂಟರ್‌ನೆಟ್ ಸಂಪರ್ಕ ಸಮಸ್ಯೆ ಕೇಳಿ ಬಂದ ಹಿನ್ನೆಲೆಯಲ್ಲಿ ಬ್ರಾಡ್‌ಬ್ಯಾಂಡ್ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಕೆಲಸ, ಆರೋಗ್ಯ ಹಾಗೂ ಬ್ಯಾಂಕಿಂಗ್ ಮುಂತಾದ  ಅಗತ್ಯ ಸೇವೆ ಒದಗಿಸುವಂಥ ಐಟಿ ಉದ್ಯೋಗಿಗಳು ಮಾತ್ರ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಇದನ್ನು ತಡೆದರೆ ವ್ಯವಸ್ಥೆಯೇ ಸ್ತಬ್ಧಗೊಳ್ಳುತ್ತದೆ ಎಂದರು.

ಅಧಿವೇಶನ ಮುಂದೂಡಿಕೆ: ಕೊರೋನಾ ಭೀತಿ ಹಾಗೂ ಮುಂಜಾಗ್ರತಾ ಕ್ರಮವಾಗಿ ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಮಂಗಳವಾರ ಬಜೆಟ್‌ಗೆ ಅನುಮೋದನೆ ಪಡೆದ ಬಳಿಕ ಅನಿರ್ದಿಷ್ಟ ಕಾಲಾವಧಿಗೆ ಮುಂದೂಡಲು ಸರ್ಕಾರ ನಿರ್ಧರಿಸಿದೆ.

ಸೋಮವಾರ ಈ ವಿಚಾರವಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಎಚ್.ಕೆ. ಪಾಟೀಲ್ ಅವರು ನಿಲುವಳಿ ಸೂಚನೆ ಪ್ರಸ್ತಾವನೆ ಮಂಡಿಸಲು ಅವಕಾಶ ಕೋರಿದರು. ಬಳಿಕ ಈ ವಿಷಯದ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ವಿಸ್ತೃತವಾಗಿ ಮಾಹಿತಿ ನೀಡಿದರು. ಸುದೀರ್ಘ ಚರ್ಚೆಯ ಬಳಿಕ ಕಲಾಪ ಸಲಹಾ ಸಮಿತಿ ಸಭೆ ನಡೆಸಿ, 2020-21 ನೇ ಸಾಲಿನ ಆಯವ್ಯಯಕ್ಕೆ ಮಂಗಳವಾರ ಅನುಮೋದನೆ ಪಡೆದುಕೊಂಡು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here