ಹೊಸ ದಿಗಂತ ವರದಿ, ಮಂಗಳೂರು:
ನಗರದ ವಿ.ಟಿ.ರೋಡ್ನ ಧನ್ವಂತರಿ ನಗರ ನಿವಾಸಿ ವಿಘ್ನೇಶ್ ನಾಯಕ್ ಆತ್ಮಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸಬೇಕು ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದರು.
ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಸಾಕ್ಷಿದಾರರಲ್ಲಿ ಒಬ್ಬರಾಗಿದ್ದ ವಿಘ್ನೇಶ್ ನಾಯಕ್ ಸೋಮವಾರ ಹಠಾತ್ತನೆ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಮಾಜಿಕ ವಲಯದಲ್ಲಿ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತರು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಪ್ರಕರಣವನ್ನು ತನಿಖೆಗೊಳಪಡಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಹಲವು ಮಂದಿಯ ಮೇಲೆ ಎಫ್ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ವಿಘ್ನೇಶ್ ನಾಯಕ್ ಹೆಸರೂ ಕೇಳಿ ಬಂದಿತ್ತು. ಹತ್ಯೆ ಸಂದರ್ಭ ಬಳಸಲಾಗಿತ್ತು ಎನ್ನಲಾದ ಕ್ವಾಲಿಸ್ ಕಾರ್ ಮಾಲಕ ವಿಘ್ನೇಶ್ ಅವರಾಗಿದ್ದರು. ಪ್ರಕರಣದ ಸಂದರ್ಭ ಇವರು ತಲೆಮರೆಸಿಕೊಂಡಿದ್ದರು. ಬಳಿಕ ವಿಘ್ನೇಶ್ ನಾಯಕ್ರನ್ನು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಇದೀಗ ಮುಂದಿನ ತಿಂಗಳು ವಿಘ್ನೇಶ್ ನಾಯಕ್ರವರ ವಿವಾಹಕ್ಕೂ ದಿನ ನಿಗದಿಯಾಗಿತ್ತು ಎಂಬ ಮಾಹಿತಿ ಇದೆ. ಇವೆಲ್ಲದರ ನಡುವೆ ವಿಘ್ನೇಶ್ ನಾಯಕ್ರವರು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕಷ್ಟು ಸಂಶಯಗಳಿಗೆ ಕಾರಣವಾಗಿದೆ. ಅವರದ್ದು ವ್ಯವಸ್ಥಿತ ಕೊಲೆಯೋ ಅಥವಾ ಪ್ರಚೋದಿತ ಆತ್ಮಹತ್ಯೆಯೋ ಎಂಬ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಾಗಿದೆ ಎಂದು ಅವರು ಹೇಳಿದರು.