ಬಳ್ಳಾರಿ: ಬರುವ ದಿನಗಳಲ್ಲಿ ಘೋಷಣೆಯಾಗಲಿರುವ ನೂತನ ವಿಜಯನಗರ ಜಿಲ್ಲೆಯಲ್ಲಿ ಕೂಡ್ಲಗಿ ತಾಲೂಕನ್ನು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ಕೂಡ್ಲಗಿ ತಾಲೂಕಿನ ಸರ್ವ ಪಕ್ಷಗಳ ನಿಯೋಗ ಭಾನುವಾರ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
ಹೊಸಪೇಟೆ ನಗರದ ಸಚಿವರ ನಿವಾಸಕ್ಕೆ ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬಂಗಾರು ಹನುಮಂತು ಅವರ ನೇತೃತ್ವದ ನಿಯೋಗದ ಸದಸ್ಯರು, ಅರಣ್ಯ, ಪರಿಸರ, ಜೀವಶಾಸ್ತ್ರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಅತ್ಯಂತ ಹಿಂದುಳಿದ ತಾಲೂಕು ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಕೂಡ್ಲಿಗಿ ತಾಲೂಕನ್ನು ಘೋಷಣೆಯಾಗಲಿರುವ ನೂತನ ವಿಜಯನಗರ ಜಿಲ್ಲೆಯಲ್ಲಿ ಸೇರ್ಪಡೆ ಮಾಡಿದರೆ ಅಭಿವೃದ್ದಿ ಕೆಲಸಗಳಿಗೆ ಹಾಗೂ ಜನರ ನಾನಾ ಕೆಲಸಕ್ಕೆ ಅನುಕೂಲವಾಗಲಿದೆ ಎಂದು ಎಲ್ಲ ಪಕ್ಷಾತೀತ ಮತ್ತು ಜಾತ್ಯಾತೀತ ಮುಖಂಡರು, ನಾಗರಿಕರು ಸಚಿವರಲ್ಲಿ ಮನವಿ ಮಾಡಿದರು.
ಇದಕ್ಕೂ ಮುನ್ನ ಮನವಿ ಪತ್ರವನ್ನು ಸಲ್ಲಿಸಿದ ಮುಖಂಡರು, ನೂತನ ಜಿಲ್ಲೆ ರಚನೆಯಾದರೆ ನಮ್ಮ ಕೂಡ್ಲಗಿ ತಾಲೂಕನ್ನು ಸೇರ್ಪಡೆ ಮಾಡಬೇಕು, ಯವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಿದೇ ನಮ್ಮ ಮನವಿಯನ್ನು ಆಲಿಸಿ, ಸಮಸ್ತ ತಾಲೂಕಿನ ಜನರಿಗೆ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು.
ಮನವಿ ಸ್ವೀಕರಿಸಿದ ಬಳಿಕ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಮಾತನಾಡಿ, ಬರುವ ದಿನಗಳಲ್ಲಿ ನೂತನ ವಿಜಯನಗರ ಜಿಲ್ಲೆ ಸ್ಥಾಪನೆಯಾದರೆ ಖಂಡಿತ ಕೂಡ್ಲಿಗಿ ತಾಲೂಕನ್ನು ಸೇರ್ಪಡೆ ಮಾಡಲಾಗುವುದು, ಈ ಮುಲಕ ನಿಮ್ಮೆಲ್ಲರಿಗೂ ಭರವಸೆ ನೀಡುವೆ ಎಂದು ತಿಳಿಸಿದರು. ಆದರೇ, ಸದ್ಯದ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜಿಲ್ಲೆಯ ಪ್ರಸ್ತಾಪ ಅನುಮಾನ ಎಂದು ಹೇಳಿದರು.
ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬಂಗಾರು ಹನುಮಂತು ಅವರು ಮಾತನಾಡಿ, ನಮ್ಮ ತಾಲೂಕನ್ನು ಯಾವುದೇ ಕಾರಣಕ್ಕೂ ನೂತನ ಜಿಲ್ಲೆಯಿಂದ ಕೈ ಬಿಡಬಾರದು, ನಾನಾ ಕ್ಷೇತ್ರಗಳಲ್ಲಿ ನಮ್ಮ ತಾಲೂಕು ಇನ್ನೂ ಅಭಿವೃದ್ಧಿ ಯಾಗಬೇಕಿದೆ. ಕ್ಷೇತ್ರದ ಶಾಸಕರು ಬಿಡುವಿಲ್ಲದೇ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ನೂತನ ಜಿಲ್ಲೆಯಲ್ಲಿ ತಾಲೂಕು ಸೇರ್ಪಡೆಯಾದರೆ ಅಭಿವೃದ್ಧಿ ಕೆಲಸಗಳಿಗೆ ಇನ್ನೂ ವೇಗ ಸಿಗಲಿದೆ. ನಾನಾ ಕೆಲಸಕ್ಕೆ ಕಚೇರಿಗೆ ತೆರಳುವ ಜನರಿಗೂ ಅನುಕೂಲವಾಗಲಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೂಡ್ಲಗಿ ತಾಲೂಕಿನ ಸರ್ವ ಪಕ್ಷಗಳ ಮುಖಂಡರು, ನಾಗರಿಕರು, ಗಣ್ಯರು ಉಪಸ್ಥಿತರಿದ್ದರು.