ಹೊಸ ದಿಗಂತ ವರದಿ, ಬಳ್ಳಾರಿ:
ವಿಜಯನಗರ ನೂತನ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಪರಗಿಂತ ವಿರೋಧಗಳೇ ಹೆಚ್ಚಾಗಿ ಕಂಡು ಬರುತ್ತಿದ್ದು, ಇದರ ಮಧ್ಯೆ ಸರ್ಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. ಆಕ್ಷೇಪಣೆಗೆ ಸರ್ಕಾರ ಕಾಲಾವಕಾಶ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆ ಇಬ್ಭಾಗ ಕ್ರಮ ಖಂಡಿಸಿ ಆಕ್ಷೇಪಣೆಯನ್ನು ಅನೇಕ ಮುಖಂಡರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕಲಾವಿಧರು. ವ್ಯಾಪಾರಸ್ಥರು ಸೇರಿದಂತೆ ಇತರರು ಸರ್ಕಾರಕ್ಕೆ ಪತ್ರಗಳ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದಾರೆ. ಇದರ ಮಧ್ಯೆ ಜಿಲ್ಲೆ ರಚನೆಗೆ ಬೆಂಬಲ ಸೂಚಿಸಿ ಪಶ್ಚಿಮ ಭಾಗಗಳ ನಾಗರಿಕರು, ಪಕ್ಷಾತೀತವಾಗಿ ರಾಜಕೀಯ ಮುಖಂಡರು ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ.
ಜಿಲ್ಲೆ ಪರ 13 ಸಾವಿರ ಪತ್ರಗಳು
ಭಾನುವಾರ ಕೂಡ್ಲಿಗಿ ಭಾಗದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬಂಗಾರು ಹನುಮಂತು ಅವರ ನೇತೃತ್ವದಲ್ಲಿ ನೂತನ ಜಿಲ್ಲೆ ರಚನೆಗೆ ಬೆಂಬಲಿಸಿ ಸಂಗ್ರಹಿಸಿದ್ದ 13 ಸಾವಿರ ಪತ್ರಗಳನ್ನು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಸಲ್ಲಿಸಿದರು.
ಹೊಸಪೇಟೆ ನಗರದ ರಾಣಿಪೇಟೆಯ ಬಿಜೆಪಿ ಕಚೇರಿಯಲ್ಲಿ ಕೂಡ್ಲಗಿ ಬಾಗದ ನಾಗರಿಕರು, ಮುಖಂಡರು ಸಚಿವ ಆನಂದ್ ಸಿಂಗ್ ಅವರಿಗೆ ಬೆಂಬಲ ಪತ್ರಗಳ ಸಲ್ಲಿಸಿದರು.
ಈ ವೇಳೆ ಸಚಿವ ಆನಂದ್ ಸಿಂಗ್ ಅವರು ಮಾತನಾಡಿ, ಕೂಡ್ಲಿಗಿ ತಾಲೂಕಿನ 25 ಗ್ರಾಮ ಪಂಚಾಯಿತಿಯಿಂದ ಪತ್ರಗಳನ್ನು ಸಂಗ್ರಹಿಸಲಾಗಿದ್ದು, ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ವಿಜಯನಗರ ಜಿಲ್ಲೆಯಿಂದ ಅನುಕೂಲವಾಗಲಿದೆ, ಹೊರತು ಯಾವುದೇ ಅನಾನುಕೂಲತೆಗಳಿಲ್ಲ, ಕೆಲವರು ಇದನ್ನೇ ರಾಜಕೀಯ ಮಾಡಲು ಹೊರಟಿದ್ದಾರೆ, ಪಶ್ಚಿಮ ತಾಲೂಕುಗಳ ಜನರ ಸುಮಾರು ವರ್ಷಗಳ ಬೇಡಿಕೆಯನ್ನು ನಮ್ಮ ಸಿ.ಎಂ.ಯಡಿಯೂರಪ್ಪ ಅವರು ಈಡೇರಿಸಿ ದಾಖಲೆ ಸೃಷ್ಟಿಸಿದ್ದಾರೆ ಎಂದರು. ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಕೂಡ್ಲಿಗಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಬೇಕು ಎನ್ನುವ ಜನರ ಬೇಡಿಕೆ, ಕನಸು ನನಸಾಗಿದೆ. ನಮ್ಮ ಭಾಗದಿಂದ ಪಕ್ಷಾತೀತವಾಗಿ ವಿಜಯನಗರ ಜಿಲ್ಲೆ ಸೇರ್ಪಡೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆನಂದ್ ಸಿಂಗ್ ಅವರು ಸ್ವಾರ್ಥಕ್ಕಾಗಿ ವಿಜಯನಗರ ಜಿಲ್ಲೆ ಮಾಡುತ್ತಿಲ್ಲ, ವಿರೋಧಿಸುವವರು ಇದನ್ನು ಅರ್ಥಮಾಡಿಕೊಳ್ಳಬೇಕು, ವಿನಾಕಾರಣ ಜನರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದರು.