Wednesday, July 6, 2022

Latest Posts

ವಿಜಯನಗರ ಪ್ರತ್ಯೇಕ ಜಿಲ್ಲೆ ಬಗ್ಗೆ ಸೋಮಶೇಖರ್ ರೆಡ್ಡಿ ಮನವೊಲಿಸುತ್ತೇನೆ: ಸಚಿವ ಶ್ರೀರಾಮುಲು

ಹೊಸದಿಗಂತ ವರದಿ, ಮೈಸೂರು

ಬಳ್ಳಾರಿಯಿಂದ ವಿಭಜನೆಗೊಂಡು ವಿಜಯನಗರ ಪ್ರತ್ಯೇಕ ಜಿಲ್ಲೆ ಆಗಲೇಬೇಕು. ಇದರಿಂದ ಆ ಜಿಲ್ಲೆಗೆ ಅನುಕೂಲವಾಗಲಿದೆಯೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದರು.

ಗುರುವಾರ ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ದೊಡ್ಡ ಜಿಲ್ಲೆ, ಅದನ್ನು ವಿಭಜಿಸಿ, ವಿಜಯನಗರ ಜಿಲ್ಲೆ ಮಾಡುವುದರಿಂದ ಜನರಿಗೆ ಅನುಕೂಲವೇ ಆಗಲಿದೆ. ಹಾಗಾಗಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚನೆ ಮಾಡುವ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಬಳ್ಳಾರಿ ೨೫೦ ಕಿ.ಮಿ. ವ್ಯಾಪ್ತಿಯ ಅತಿ ದೊಡ್ಡ ಜಿಲ್ಲೆ. ಬಹಳ ದಿನಗಳಿಂದ ವಿಜಯನಗರ ಪ್ರತ್ಯೇಕ ಜಿಲ್ಲೆ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಇದು ನಾನು ಸಿಎಂ ವಿವೇಚನೆಗೆ ಬಿಟ್ಟ ವಿಚಾರ ಅಂತ ಹೇಳಿದ್ದೆ. ಈಗಾಗಲೇ ಸೋಮಶೇಖರ್ ರೆಡ್ಡಿಯನ್ನ ಸಿಎಂ ಮನವೊಲಿಸಲು ಮುಂದಾಗಿದ್ದಾರೆ. ನಾನು ಸೋಮಶೇಖರ್ ರೆಡ್ಡಿ ಮನವೊಲಿಸುತ್ತೇನೆ ಎಂದರು.

ರಮೇಶ್ ಜಾರಕಿಹೊಳಿ ಆಗಮನದಿಂದ ಶ್ರೀರಾಮುಲುಗೆ ಹಿನ್ನಡೆ ಎಂಬ ಚರ್ಚೆ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ನಾನು ಹಿನ್ನೆಡೆಯಾಗುತ್ತೆ ಅಂತ ಯಾವತ್ತೂ ರಾಜಕಾರಣ ಮಾಡಿದವನಲ್ಲ. ಇಂದಿಗೂ ನನ್ನ ಜೊತೆ ಹಲವಾರು ಶಾಸಕರು, ಸಮುದಾಯದ ಬೆಂಬಲ ಇದೆ. ಬಳ್ಳಾರಿಯಿಂದ ಚಾಮರಾಜನಗರ ಜಿಲ್ಲೆಯವರೆಗೆ ನನಗೆ ಜನರ ಪ್ರೀತಿ ಇದೆ. ಚಾಮರಾಜನಗರದಿಂದ ಬೀದರ್‌ವರೆಗೆ ಅದೇ ಪ್ರೀತಿ ವಿಶ್ವಾಸ ತೋರುತ್ತಿದ್ದಾರೆ. ಆ ಕ್ರೆಡಿಬಿಲಿಟಿಯೇ ನನ್ನನ್ನ ಕೈ ಹಿಡಿಯುತ್ತೇ ಅನ್ನೋ ವಿಶ್ವಾಸವಿದೆ.

ಅಧಿಕಾರಕ್ಕೊಸ್ಕರ ರಾಜಕಾರಣ ಮಾಡುವವನು ನಾನಲ್ಲ ಎಂದು ಹೇಳಿದರು. ರಮೇಶ್ ಜಾರಕಿಹೊಳಿ ಜೊತೆ ರಾಜಕೀಯವಾಗಿ ನಾನು ಯಾವುದೇ ಭೇಟಿ ಮಾಡಲ್ಲ. ನಾನು ಜವಾಬ್ದಾರಿಯುತ ಸ್ಥಾನದಲ್ಲಿರೋನು. ನಾನು ತುಂಗಭದ್ರಾ ವ್ಯಾಪ್ತಿಯ ನವಿಲಿ ಏತ ನೀರಾವರಿ ಯೋಜನೆ ಸಂಬoಧ ಭೇಟಿ ಕೊಟ್ಟಿದ್ದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ರಚನೆಗೆ 17 ಜನರ ಸಹಕಾರದ ಜೊತೆ, 105 ಮಂದಿಯ ಶ್ರಮವೂ ಇದೆ. ಐದಾರು ಬಾರಿ ಶಾಸಕರಾಗಿ ಸಚಿವರಾಗದೇ ಇದ್ದವರು ಕೂಡ ಇದ್ದಾರೆ. ಐದಾರು ಬಾರಿ ಗೆದ್ದಿರುವ ಕೆಲವರಿಗೆ ಅವಕಾಶ ಸಿಗಬೇಕು. ಯರ‍್ಯಾರು ಆಕಾಂಕ್ಷಿಗಳಿದ್ದಾರೋ ಅವರಿಗೆ ಆದ್ಯತೆ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ.

ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರವಾಗಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಪುಟ ವಿಚಾರವಾಗಿ ಸಂಸದ ಶ್ರೀನಿವಾಸ ಪ್ರಸಾದ್ ಬೇಸರಗೊಂಡಿದ್ದಾರೆ. ಅವರ ಮನೆಗೆ ತೆರಳಿ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.

ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿರುವುದು ಮರಾಠ ಭಾಷೆಯ ಬೆಳೆವಣಿಗೆಗಾಗಿ ಅಲ್ಲ. ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಆ ಜಾತಿಯ ಅಭಿವೃದ್ದಿಗಾಗಿ ನಿಗಮ ಸ್ಥಾಪಿಸಿದ್ದೇವೆ. ದೇಶಕ್ಕಾಗಿ ಹೋರಾಡಿದ ಕ್ಷತ್ರಿಯ ಸಮುದಾಯದ ಅದು. ಬೆಳಗಾವಿ ಬೀದರ್ ಭಾಗದಲ್ಲಿ ಆ ಸಮುದಾಯದಲ್ಲಿ ಬಡತನ ಇದೆ. ಅಲ್ಲಿರುವ ಬಡವರ ಕಲ್ಯಾಣವಾಗಬೇಕಿದೆ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಸ್ವಾರ್ಥ ಇಲ್ಲ ಎಂದು ನುಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss