ವಿಜಯಪುರ: ಎಲ್ಲೆಡೆ ಮುಂದುವರೆಯುತ್ತಿರುವ ಕೊರೋನಾ ಅಟ್ಟಹಾಸ ನಿಯಂತ್ರಣಕ್ಕಾಗಿ ಸರ್ಕಾರ ಹೆಣಗುತ್ತಿದ್ದರೂ, ಜಿಲ್ಲೆಯಲ್ಲಿ ಕೊರೋನಾ ನಿಯಮ ಗಾಳಿಗೆ ತೂರಿ, ಜಾತ್ರೆ ನೆಪದಲ್ಲಿ ಗುಂಪು ಗುಂಪಾಗಿ ಕೂಡಿಕೊಂಡು ಮಟನ್ ಊಟ ಸೇವಿಸಿದ ಭಕ್ತರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ತಾಂಡಾದಲ್ಲಿ ದುರ್ಗಾದೇವಿ ಹಾಗೂ ಸೇವಾಲಾಲ್ ಜಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಗುರುವಾರಷ್ಟೇ ಕೂಡಗಿ ಗ್ರಾಮದಲ್ಲಿ ಸ್ವಯಂ ಲಾಕ್ಡೌನ್ ಮಾಡಿಕೊಂಡಾಗ, ಇತರೆ ಗ್ರಾಮಗಳಿಗೆ ಮಾದರಿಯಾಗಿತ್ತು. ಆದರೆ ಇದರ ಮರುದಿನವೇ ನೂರಾರು ಜನರು ಜಾತ್ರೆಯಲ್ಲಿ ಸೇರಿಕೊಂಡು, ಮಾಸ್ಕ್ ಹಾಗೂ ಸಾಮಾಜಿಕ ಅಂತರವೂ ಇಲ್ಲದೆ, ಭರ್ಜರಿಯಾಗಿ ಜಾತ್ರೆ ಆಚರಿಸಿದ್ದಾರೆ.
ಅಲ್ಲದೆ ಮಹಿಳೆಯರು, ಪುರುಷರು ಸೇರಿಕೊಂಡು ಜಾತ್ರೆಯ ಹೆಸರಲ್ಲಿ ಮಟನ್ ಊಟ ತಯಾರಿಸಿ, ಗುಂಪು ಗುಂಪಾಗಿ ಕುಳಿತು, ಊಟ ಮಾಡಿ ಕೊರೋನಾ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.
ಈ ಸಂಬಂಧ ಕೂಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.