ವಿಜಯಪುರ: ನಗರದ ಡಿ.ಎನ್. ದರಬಾರ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಸ್ಸೆಸೆಲ್ಸಿ ಪರೀಕ್ಷೆ ವೇಳೆ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಹಳೇ ಪ್ರಶ್ನೆ ಪತ್ರಿಕೆ ನೀಡಿ ಯಡವಟ್ಟು ಸೃಷ್ಟಿ ಮಾಡಿದ್ದು, ಈ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ನಗರದ ಡಿಡಿಪಿಐ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಬುಧವಾರ ನಡೆದ ಎಸ್ಸೆಸೆಲ್ಸಿ ಪರೀಕ್ಷೆಯ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ಅದಲು, ಬದಲು ಮಾಡುವ ಮೂಲಕ ದರಬಾರ ಶಿಕ್ಷಣ ಸಂಸ್ಥೆಯಲ್ಲಿ ಗೊಂದಲ ಮೂಡಿಸಿದ್ದು, ಇದರಿಂದ ಪರೀಕ್ಷಾರ್ಥಿಗಳಲ್ಲಿ ಆತಂಕ ಮೂಡಿಸಿದಂತಾಗಿದೆ. ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ರಿಪಿಟರ್ ವಿದ್ಯಾರ್ಥಿಗಳಿಗೆ ಕೊಡಬೇಕಾದ ಪ್ರಶ್ನೆ ಪತ್ರಿಕೆ ನೀಡಿದ್ದಾರೆ. ಇನ್ನು ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಕೊಟ್ಟ ಪ್ರಶ್ನೆ ಪತ್ರಿಕೆ ಬೇರೆಯದ್ದಾಗಿದೆ ಎಂಬುದು ಗೊತ್ತಾಗುತ್ತಲೇ, ಕೆಲ ವಿದ್ಯಾರ್ಥಿಗಳನ್ನು ಕರೆಯಿಸಿ ಮತ್ತೆ ಉತ್ತರ ಬರೆಯಿಸಿದ್ದಾರೆ. ಇನ್ನು ತಮ್ಮ ಸಿಲೇಬಸ್ ಅಲ್ಲದಿದ್ದರೂ ಸಹಿತ ಉತ್ತರ ಬರೆದು ಮನೆಗೆ ಬಂದಿದ್ದಾರೆ. ರಿಪಿಟರ್ಗಳಿಗೆ ಕೊಡಬೇಕಾದ ಪ್ರಶ್ನೆ ಪತ್ರಿಕೆ ನಮಗೆ ಕೊಟ್ಟಿದ್ದಾರೆ, ಇದರಿಂದಾಗಿ ನಮಗೆ ಉತ್ತರ ಬರೆಯಲಾಗಿಲ್ಲ ಇನ್ನೊಮ್ಮೆ ಪರಿಕ್ಷೆ ನಡೆಸಿ ಎಂಬುದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಇದಕ್ಕೆ ಸ್ಪಂದಿಸಿ ಡಿಡಿಪಿಐ ಪ್ರಸನ್ನಕುಮಾರ ಮಾತನಾಡಿ, ಇಲ್ಲಿ ಒಂಬತ್ತು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿದ್ದು, ಕೆಲವರಿಗೆ ಕರೆಯಿಸಿ ಪರಿಕ್ಷೆ ಬರೆಯಿಸಲಾಗಿದೆ. ಇನ್ನು ಈ ಕುರಿತು ಈಗಾಗಲೇ ಇಬ್ಬರನ್ನು ಅಮಾನತ್ತುಗೊಳಿಸುವಂತೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.