Sunday, August 14, 2022

Latest Posts

ವಿಜಯಪುರ| ಬಡ ಕುಟುಂಬಗಳಿಗೆ 2300 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್: ಕಾರಜೋಳ

ವಿಜಯಪುರ: ಯಾವುದೇ ರಾಜ್ಯಗಳು ನೀಡದ ಪ್ಯಾಕೇಜ್‌ನ್ನು ಕೊರೋನಾ ಸಂಕಷ್ಟಕ್ಕೆ ಒಳಗಾದ ರಾಜ್ಯದ ಜನರಿಗೆ 2300 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಘೋಷಣೆ ಮಾಡಿದ್ದು, ಈ ಮೂಲಕ ಸರ್ಕಾರ ಬಡವರ ನೆರವಿಗೆ ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಹೊಡೆತದಿಂದ ಸಮಸ್ಯೆ ಎದುರಿಸುತ್ತಿರುವ ರಸ್ತೆ ಬದಿಯಲ್ಲಿ ಅಂದಿನ ದುಡಿಮೆ ಅಂದೇ ದುಡಿಯುವ ಕ್ಷೌರಿಕರಿಗೆ, ಅಗಸರಿಗೆ, ಟ್ಯಾಕ್ಸಿ, ಆಟೋ ಚಾಲಕರಿಗೆ, ಚರ್ಮೊದ್ಯೋಗ ಮಾಡುವ 11,770 ಜನರಿಗೆ ಪ್ರತಿ ಕುಟುಂಬಕ್ಕೆ 5 ಸಾವಿರ ರೂ.ಗಳಂತೆ ಪರಿಹಾರ ನೀಡಲಾಗಿದೆ ಎಂದರು.
ಅಲ್ಲದೆ ಇವರಿಗೆ ಕಳೆದ ಎರಡು ತಿಂಗಳ ಪಡಿತರ ನೀಡಲಾಗಿದ್ದರೂ ಕೂಡ ಉದ್ಯೋಗವಿಲ್ಲದೆ ಸಂಕಷ್ಟಕ್ಕೀಡಾಗಿರುವ ಕಾರಣ ಮುಖ್ಯಮಂತ್ರಿಗಳು ದುಡಿಯುವ ವರ್ಗದವರಾದ ಕ್ಷೌರಿಕರು, ಅಗಸರು, ಟ್ಯಾಕ್ಸಿ, ಆಟೋ ಚಾಲಕರಿಗೆ ಒಟ್ಟು 7.75 ಲಕ್ಷ ಚಾಲಕರಿಗೆ ಹಾಗೂ 90 ಸಾವಿರ ಕ್ಷೌರಿಕರಿಗೆ, 60 ಸಾವಿರ ಅಗಸರಿಗೆ ನೇಕಾರರಿಗೆ, 11,770 ಚಮ್ಮಾರರಿಗೆ ವಿಜಯಪುರ ಒಂದರಲ್ಲೆ ರಸ್ತೆ ಬದಿ ಕಾರ್ಯನಿರ್ವಹಿಸುವ 438 ಚಮ್ಮಾರರಿಗೆ 5 ಸಾವಿರ ರೂ.ಗಳಂತೆ ಪರಿಹಾರ ನೀಡಲಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿಗಳು ಸಂಕಷ್ಟಕ್ಕೀಡಾದವರಿಗೆ ಎರಡು ತಿಂಗಳ ಪಡಿತರ ಒದಗಿಸಿದ್ದಾರೆ. ಜನ್‌ಧನ್ ಖಾತೆಗೆ 500 ರೂ.ಗಳಂತೆ ಜಮೆ, ಸುಮಾರು 8 ಕೋಟಿ ಫಲಾನುಭವಿಗಳಿಗೆ 3 ತಿಂಗಳ ಉಚಿತ ಸಿಲೆಂಡರ್ ನೀಡಿದ್ದು, ರಾಜ್ಯ ಸರ್ಕಾರದ ಅನಿಲ ಭಾಗ್ಯ ಯೋಜನೆ ಫಲಾನುಭವಿಗಳಿಗೆ ತಲಾ 3 ಸಿಲೆಂಡರ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾರ್ಮಿಕರಿಗೆ, ನಿರ್ಗತಿಕರಿಗೆ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಿದ್ದು, ಇದರ ಜೊತೆಗೆ ಜಿಲ್ಲೆಯಲ್ಲಿ ಒಟ್ಟು 2144 ಜನರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಅವರಿಗೆ ಊಟ, ವಸತಿ ಸೌಲಭ್ಯದ ಜೊತೆಗೆ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಂಡಿದೆ ಎಂದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಸ್ಪಿ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದ ರೆಡ್ಡಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss