Wednesday, June 29, 2022

Latest Posts

ವಿಜಯಪುರ| ಅಧಿಕಾರಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಶಿಕ್ಷಕನ ವಿರುದ್ಧ ಪ್ರಕರಣ ದಾಖಲು

ವಿಜಯಪುರ: ತಾಲೂಕಿನ ಮಹಾಲ್ ಐನಾಪುರ ತಾಂಡಾದಲ್ಲಿ ಬೇರೆ ರಾಜ್ಯದಿಂದ ಬಂದವರನ್ನು ಸಮುದಾಯ ಭವನದಲ್ಲಿ ಕ್ವಾರಂಟೈನ್ ಮಾಡಲು ಮುಂದಾದ ಸಂದರ್ಭ, ಅಧಿಕಾರಿ ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಖಾಸಗಿ ಶಾಲಾ ಶಿಕ್ಷಕನೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡುವಾಗ, ಯಾರಾದರೂ ಅಡೆತಡೆ ಮಾಡಿದ್ದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಬುಧವಾರ ಸಂಜೆ ಸೋಂಕಿನಿಂದ ಗುಣಮುಖರಾದ ಓರ್ವ ಗರ್ಭಿಣಿ ಮಹಿಳೆಯನ್ನು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಹೊಂದಿದ್ದು, 21 ವರ್ಷ ವಯೋಮಾನದ ಮಹಿಳೆ ರೋಗಿ ಸಂಖ್ಯೆ 401 ಬಿಡುಗಡೆ ಹೊಂದಿದ್ದಾರೆ. ಒಂಭತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ಈ ಮಹಿಳೆಗೆ ಪರಿಣಾಮಕಾರಿ ಚಿಕಿತ್ಸೆ ಮೂಲಕ ಗುಣಪಡಿಸಿರುವುದು ತಜ್ಞ ವೈದ್ಯರ ಸಾಧನೆಯಾಗಿದೆ. ಇನ್ನುಳಿದ ಸೋಂಕಿತರ ಆರೋಗ್ಯ ಸ್ಥಿರವಾಗಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ 52 ಸೋಂಕಿತರ ಪ್ರಕರಣ ದೃಢಪಟ್ಟಿದ್ದು, ಮೂರು ಜನ ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 35 ಜನ ಸೋಂಕಿತ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮಹಾರಾಷ್ಟçದ ಮುಂಬೈನಿಂದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ 2212 ಜನರು ಬಂದ ಬಗ್ಗೆ ವರದಿಯಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ. 799 ಜನರು 28 ದಿನಗಳ ಐಸೋಲೇಶನ್ ಅವಧಿ ಪೂರ್ಣಗೊಳಿಸಿದ್ದಾರೆ. 1376 ಜನರು ರಿರ್ಪೋಟಿಂಗ್ ಅವಧಿಯಲ್ಲಿದ್ದು, ಈವರೆಗೆ 2638 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 2504 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 82 ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss