ವಿಜಯಪುರ: ಕೊರೋನಾ ವಿಷಮ ಪರಿಸ್ಥಿತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆಸಿರುವುದು ದೇಶಕ್ಕೆ ಮಾದರಿಯಾಗಿದೆ. ಆದರೆ ಸದ್ಯ ಶಿಕ್ಷಣ ಇಲಾಖೆ ಅಧಿಕಾರಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿಸಿಟಿವಿ ಫೂಟೇಜ್ಗಳನ್ನು ಹಾರ್ಡ್ ಡಿಸ್ಕ್ ಮೂಲಕ ತಕ್ಷಣ ಕೊಡಬೇಕು ಎಂದು ಶಿಕ್ಷಕರ ಮೇಲೆ ಒತ್ತಡ ಹಾಕುವುದು ಸರಿಯಲ್ಲಿ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿಸಿಟಿವಿ ಫೂಟೇಜ್ ನೀಡಿ ಎಂದು ಕೇಳುವುದರಲ್ಲಿ ಎರಡು ಮಾತಿಲ್ಲ. ಆದರೆ ತಕ್ಷಣ ಕೊಡಿ ಎನ್ನುವ ನೆಪದಲ್ಲಿ ಶಿಕ್ಷಕರ ಮೇಲೆ ಕಿರುಕುಳ ಎನ್ನುವಂತಾಗಬಾರದು ಅನ್ನುವುದು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ಕೋವಿಡ್ ಸವಾಲುಗಳನ್ನು ಎದುರಿಸಿ ಯಶಸ್ವಿ ಪರೀಕ್ಷೆ ನಡೆಸಿದ ಶಿಕ್ಷಕರಿಗೆ ಸರ್ಕಾರ ತೊಂದರೆ ಕೊಡುತ್ತಿದೆ ಎನ್ನುವುದು ಯಾವುದೇ ಕಾರಣಕ್ಕೂ ಅನ್ನಿಸುವಂತಾಗಬಾರದು ಎಂದು ಅವರು ತಿಳಿಸಿದ್ದಾರೆ.