Wednesday, July 6, 2022

Latest Posts

ವಿಜಯಪುರ| ಎಸ್‌ಡಿಪಿಐ ಸಂಘಟನೆ ಕೂಡಲೇ ನಿಷೇಧಿಸಿ: ಮಾಜಿ ಸಚಿವ ಪಟ್ಟಣ ಶೆಟ್ಟಿ ಆಗ್ರಹ

ವಿಜಯಪುರ: ಬೆಂಗಳೂರಿನ ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ಗಲಭೆ ನಡೆದಿರುವುದು ಸರಿಯಲ್ಲ. ಈ ಗಲಭೆಯಲ್ಲಿ ಎಸ್‌ಡಿಪಿಐ ಸಂಘಟನೆ ಕೈವಾಡವಿದ್ದು, ಕೂಡಲೇ ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಂಘಟನೆಯಲ್ಲಿ ಸಮಾಜಘಾತುಕ ಶಕ್ತಿಗಳಿವೆ. ತಕ್ಷಣ ಸಂಘಟನೆ ನಿಷೇಧಿಸಬೇಕು. ಅನಂತರ ಈ ಘಟನೆಗೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ. ಈಗಾಗಲೇ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿ ಮಾಡಿದ ಕಿಡಿಗೇಡಿಗಳ ಆಸ್ತಿ ಜಪ್ತಿ ಮಾಡಲು ಗೃಹ ಸಚಿವರು ಆದೇಶ ಹೊರಡಿಸಿದ್ದಾರೆ. ಮುಲಾಜಿಲ್ಲದೇ ಸರ್ಕಾರ ಆಸ್ತಿ ಜಪ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಘಟನೆಯಲ್ಲಿ ಮೃತಪಟ್ಟವರಿಗೆ ಪರಿಹಾರಕ್ಕಾಗಿ ಮಾಜಿ ಸಚಿವ ಜಮೀರ್ ಆಗ್ರಹಿಸುತ್ತಿರುವುದರ ಹಿಂದೆ ಮತ ಬ್ಯಾಂಕ್ ರಾಜಕಾರಣವಿದೆ. ಅಲ್ಲದೆ ಈ ವಿಷಯದಲ್ಲಿ ಯಾರ ಮುಲಾಜಿಗೂ ಸರ್ಕಾರ ಬೀಳಬಾರದು. ಈ ನಿಟ್ಟಿನಲ್ಲಿ ರಾಜ್ಯದ ಗೃಹ ಸಚಿವರು ದಿಟ್ಟ ನಿರ್ಧಾರ ಕೈಗೊಂಡಿದ್ದು, ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಗಣೇಶೋತ್ಸವ ಹಿಂದೂಗಳ ದೊಡ್ಡ ಹಬ್ಬವಾಗಿದ್ದು, ಈ ಹಬ್ಬಕ್ಕೆ ವಿಧಿಸಿರುವ ನಿರ್ಬಂಧಗಳನ್ನು ಜಿಲ್ಲಾಡಳಿತ ಸಡಿಲಿಸಬೇಕು. ಇಷ್ಟಕ್ಕೂ ಜಿಲ್ಲಾಡಳಿತ ಸಾರ್ವಜನಿಕ ಗಣೇಶೋತ್ಸವ ಆಚರಣೆ ಕುರಿತು ಗಜಾನನ ಮಹಾಮಂಡಳಿಗಳು ಹಾಗೂ ಗಜಾನನ ಉತ್ಸವ ಮಂಡಳಿ ಪದಾಧಿಕಾರಿಗಳೊಂದಿಗೆ ಮುಂಗಡ ಸಭೆ ಕರೆದು ಚರ್ಚಿಸಲಿಲ್ಲ. ಜಿಲ್ಲಾಡಳಿತ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದು ಸರಿಯಲ್ಲ ಎಂದರು.
ಗಜಾನನ ಉತ್ಸವ, ದಸರಾ, ದೀಪಾವಳಿ ಹೀಗೆ ಸಾಲು-ಸಾಲು ಹಬ್ಬಗಳು ಬಂದಿವೆ. ಆದರೆ ನಗರದಲ್ಲಿ ಹದಗೆಟ್ಟು ಹೋಗಿರುವ ರಸ್ತೆಗಳನ್ನು ತಕ್ಷಣ ದುರಸ್ತಿಗೊಳಿಸಬೇಕು. ಇನ್ನೊಂದೆಡೆ ನಗರದಲ್ಲಿ ಹಾಡ-ಹಗಲೇ ದರೋಡೆ ಕೃತ್ಯಗಳು ನಡೆಯುತ್ತಿವೆ. ಈ ಘಟನೆಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಬೀಟ್ ವ್ಯವಸ್ಥೆ ಬಲಪಡಿಸಬೇಕು ಎಂದರು.
ಪಾಲಿಕೆ ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ, ಮಾಜಿ ಸದಸ್ಯ ಅಪ್ಪು ಸಜ್ಜನ, ಗಜಾನನ ಮಹಾಮಂಡಳಿಯ ಮುಖಂಡ ಶಿವಾನಂದ ಮಾನಕರ, ಚಂದ್ರು ಉಮರ್ಜಿ, ವಿಜಯ ಜೋಶಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss