Wednesday, August 10, 2022

Latest Posts

ವಿಜಯಪುರ| ಒಣದ್ರಾಕ್ಷಿ ವ್ಯಾಪಾರಸ್ಥರಿಂದ ರೈತರಿಗೆ, ಸರ್ಕಾರಕ್ಕೆ ವಂಚನೆ: ಇನ್ನು ಇ- ಟ್ರೇಡಿಂಗ್ ವ್ಯವಹಾರ ಶುರು

ವಿಜಯಪುರ: ಕೆಲ ಒಣದ್ರಾಕ್ಷಿ ವ್ಯಾಪಾರಸ್ಥರು ರೈತರಿಗೆ ಹಾಗೂ ಸರ್ಕಾರದ ತೆರಿಗೆ ವಂಚನೆ ಮಾಡುವ ನಿಟ್ಟಿನಲ್ಲಿ ಆನ್‌ಲೈನ್ ಇ- ಟ್ರೇಡಿಂಗ್ ಒಣ ದ್ರಾಕ್ಷಿ ವ್ಯಾಪಾರ ತಡೆಯುವ ಹುನ್ನಾರ ನಡೆಸುತ್ತ, ದ್ರಾಕ್ಷಿ ಬೆಳೆಗಾರರ ದಾರಿ ತಪ್ಪಿಸುತ್ತಿದ್ದು, ರೈತರು ಈ ಕುರಿತು ಕಿವಿಗೊಡಬಾರದು ಎಂದು ಎಪಿಎಂಸಿ ಅಧ್ಯಕ್ಷ ಸುರೇಶಗೌಡ ಬಿರಾದಾರ, ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ ಕೋರಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿ, ಈ ಭಾಗದ ದ್ರಾಕ್ಷಿ ಬೆಳೆಗಾರ ಒತ್ತಾಯದಿಂದ ಆನ್‌ಲೈನ್ ಒಣದ್ರಾಕ್ಷಿ ವ್ಯಾಪಾರ, ವಹಿವಾಟು ಆರಂಭಗೊಂಡಿದೆ. ಆದರೆ ಕೆಲ ವ್ಯಾಪಾರಿಗಳು ದ್ರಾಕ್ಷಿ ಬೆಳೆಗಾರರ ದಿಕ್ಕು ತಪ್ಪಿಸಿ, ಈ ಹಿಂದಿನ ಬಹಿರಂಗ ಹರಾಜು ಪದ್ಧತಿಯ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತ, ರೈತರಿಗೆ ಹಾಗೂ ಸರ್ಕಾರಕ್ಕೆ ವಂಚಿಸುವ ನಡೆಗೆ ಮುಂದಾಗಿದ್ದಾರೆ. ಇದಕ್ಕೆ ರೈತರು ಅವಕಾಶ ನೀಡದೆ, ಇ- ಟ್ರೇಡಿಂಗ್ ಮೂಲಕವೇ ವ್ಯವಹಾರ ನಡೆಸಬೇಕು ಎಂದು ಹೇಳಿದರು.
ಇ-ಟ್ರೇಡಿಂಗ್ ವ್ಯವಸ್ಥೆ ರೈತರಿಗೆ ಅನುಕೂಲವಾಗಿದ್ದು, ಪಾರದರ್ಶಕ ವ್ಯವಹಾರವಾಗಿದೆ. ಆದರೆ ಬಹಿರಂಗ ಹರಾಜಿನಲ್ಲಿ ದ್ರಾಕ್ಷಿ ಬೆಳೆಗಾರರು ತೊಂದರೆಗೆ ಒಳಗಾಗಿ, ಹಾನಿ ಸಂಭವಿಸುವ ಪರಿಸ್ಥಿತಿ ಹೆಚ್ಚಿದೆ. ಹೀಗಾಗಿ ಪ್ರತಿ ದ್ರಾಕ್ಷಿ ಬೆಳೆಗಾರರು ಇ-ಟ್ರೇಡಿಂಗ್ ವ್ಯಾಪಾರಕ್ಕೆ ಮುಂದಾಗಬೇಕು. ಈ ವ್ಯವಸ್ಥೆಯಿಂದ ದ್ರಾಕ್ಷಿ ಬೆಳೆಗಾರರಿಗೆ ತಮ್ಮ ಉತ್ಪನ್ನದ ಬೆಲೆ, ಮಾರಾಟದ ಮಾಹಿತಿ ಸೇರಿದಂತೆ ವ್ಯಾಪಾರ, ವಹಿವಾಟಿನ ವಿಷಯ ಸೂಕ್ತವಾಗಿ ಲಭ್ಯವಾಗುತ್ತದೆ. ಆದರೆ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ರೈತರಿಗೆ ತಮ್ಮ ಉತ್ಪನ್ನಕ್ಕೆ ನಂತರ ಯಾವ ಧಾರಣೆ ಬಂದಿದೆ ಎಂಬುದು ಗೊತ್ತಾಗುವುದಿಲ್ಲ. ಅಲ್ಲದೆ ಕೆಲವೊಂದು ವ್ಯಾಪಾರಿಗಳು, ಮಧ್ಯವರ್ತಿಗಳು ದ್ರಾಕ್ಷಿ ಬೆಳೆಗಾರರನ್ನು ಶೋಷಣೆ ಮಾಡುತ್ತಿದ್ದಾರೆ. ಇ-ಟ್ರೇಡಿಂಗ್ ವ್ಯವಸ್ಥೆಯ ಬಗ್ಗೆ ಇಲ್ಲ-ಸಲ್ಲದ ವಿಷಯಗಳನ್ನು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೊರೋನಾದಿಂದ ದ್ರಾಕ್ಷಿ ಬೆಳೆಗಾರರಿಗೆ ಅಪಾರ ಹಾನಿಯಾಗಿದೆ. ರಫ್ತಿಗೆ ಹೆಸರಾದ ವಿಜಯಪುರ ದ್ರಾಕ್ಷಿ ಈ ಬಾರಿ ರಫ್ತು ಮಾಡಲು ಸಾಧ್ಯವಾಗಿಲ್ಲ. 400 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಿಂತು ಹೋಗಿದೆ. ಈಗಾಗಲೇ ಕೊರೋನಾ ಹಿನ್ನೆಲೆಯಲ್ಲಿ ತೆಂಗು ಬೆಳೆಗಾರರಿಗೆ ಒಂದು ಕ್ವಿಂಟಾಲ್‌ಗೆ 1300 ರೂ.ಗಳಷ್ಟು ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ. ಅದೇ ತೆರನಾಗಿ ದ್ರಾಕ್ಷಿ ಬೆಳೆಗಾರರಿಗೂ ಈ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಪ್ರತಿಕ್ವಿಂಟಾಲ್‌ಗೆ ಕನಿಷ್ಠ 5 ಸಾವಿರ ರೂ.ಗಳ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಮಾವು, ತೆಂಗು ಅಭಿವೃದ್ಧಿ ಮಂಡಳಿ ಸ್ಥಾಪನೆ ರೀತಿಯಲ್ಲಿ ದ್ರಾಕ್ಷಿ ಬೆಳೆ ಮಂಡಳಿ ಸ್ಥಾಪನೆಗಾಗಿ ವರ್ಷಗಳಿಂದಲೂ ಒತ್ತಾಯಿಸಲಾಗುತ್ತಿದ್ದು, ಸರ್ಕಾರ ಈ ಕುರಿತು ಗಮನ ಹರಿಸಬೇಕು ಎಂದರು.
ಪೀರಗೊಂಡ ಗದ್ಯಾಳ, ಎಸ್.ಎಚ್. ನಾಡಗೌಡ, ಎಂ.ಎಸ್. ರುದ್ರಗೌಡ, ಡಾ.ಕೆ.ಎಚ್. ಮುಂಬಾರೆಡ್ಡಿ ಮತ್ತಿರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss