ವಿಜಯಪುರ: ನಗರದ ಬಿಎಲ್ ಡಿಇ ಎ.ವಿ.ಎಸ್. ಆಯುರ್ವೇದ ಕಾಲೇಜಿನ ಫಾರ್ಮಸಿ ವತಿಯಿಂದ ತಯಾರಿಸಿದ ಕೊರೋನಾ ರೋಗ ನಿರೋಧಕ ಉತ್ಪನ್ನಗಳನ್ನು ಜಿಲ್ಲಾಡಳಿತದ ಕೊರೋನಾ ಸೇನಾನಿಗಳಿಗಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಬುಧವಾರ ನೀಡಲಾಯಿತು.
ಈ ಸಂದರ್ಭ ಬಿಎಲ್ ಡಿಇ ನಿರ್ದೇಶಕ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಯುಷ್ ಮಂತ್ರಾಲಯದಿಂದ ನಿಗಧಿಪಡಿಸಿದ ಉತ್ಪನ್ನಗಳನ್ನು ಬಳಸುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಬಿಎಲ್ ಡಿಇ ಸಂಸ್ಥೆ ಆಯುರ್ವೇದ ಕಾಲೇಜ್ ಫಾರ್ಮಸಿಯಲ್ಲಿ, ಔಷಧ ತಜ್ಞರ ನೆರವಿನಿಂದ ಹರಿದ್ರಾಕಾಂಡ ಹಾಗೂ ಹರ್ಬಲ್ ಟೀ ಉತ್ಪನ್ನಗಳನ್ನು ತಯಾರಿಸಿದ್ದು, ಹರಿದ್ರಾಕಾಂಡ “ಗೊಲ್ಡನ್ ಮಿಲ್ಕ್” ಎಂದು ಹಾಗೂ ನಿತ್ಯ ಕುಡಿಯುವ ಚಹಾದಲ್ಲಿ ಹರ್ಬಲ್ ಟೀ ಬೆರೆಸಿ, ಕುಡಿಯಬಹುದಾಗಿದೆ ಎಂದರು.
ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ ಮಾತನಾಡಿ, ಕೊರೋನಾ ವಿರುದ್ಧ ಸೆಣೆಸಾಡಲು ಇನ್ನು ಲಸಿಕೆಗಳು ಲಭ್ಯವಿಲ್ಲ. ಇಸ್ರೆಲ್ ದೇಶ ಈ ಲಸಿಕೆ ತಯಾರಿಸಿದ ಸುದ್ದಿ ಬಂದಿದ್ದು, ಇದು ಮಾರುಕಟ್ಟೆಗೆ ಬರಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ. ನಮ್ಮ ಮನೆಯ ಮದ್ದು ಸದ್ಯಕ್ಕೆ ದಿವ್ಯ ಔಷಧವಾಗಿದ್ದು, ನಮ್ಮ ಅಡಡುಗೆ ಮನೆಗಳಲ್ಲಿ ಸಿಗುವ, ದಿನನಿತ್ಯ ಬಳಸುವ ಪದಾರ್ಥಗಳನ್ನು ನಾವು ರೋಗ ಪ್ರತಿನಿರೋಧಕ ಶಕ್ತಿಯನ್ನು ಬೆಳೆಸಲು ಬಳಸಬಹುದಾಗಿದೆ ಎಂದರು.
ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಇಲ್ಲಿನ ಬಿಎಲ್ ಡಿಇ ಆಯುರ್ವೇದ ಫಾರ್ಮಸಿಯಲ್ಲಿ ತಯಾರಿಸಿರುವ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಅನುಮತಿ ಕೇಳಿದ್ದು, ದೊರೆತ ನಂತರ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ ಸಾರ್ವಜನಿಕರಿಗೆ ನಿಗಧಿತ ದರದಲ್ಲಿ ಮಾರಾಟ ಮಾಡಲಾಗುವುದು ಎಂದರು.
ಜಿಪಂ ಸಿಇಒ ಗೋವಿಂದ ರೆಡ್ಡಿ, ಕಾಲೇಜ್ ಉಪಪ್ರಾಚಾರ್ಯರಾದ ಡಾ.ಶಶಿಧರ ನಾಯಕ, ಡಾ.ಪ್ರಮೋದ ಬರಗಿ, ಮಾರುಕಟ್ಟೆ ಅಧಿಕಾರಿ ಸಿದ್ದಾರ್ಥ ಪಾಟೀಲ ಇದ್ದರು.