ವಿಜಯಪುರ: ಇಲ್ಲಿನ ಚಾಲುಕ್ಯ ನಗರದ ನಿವಾಸಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದ ಹಿನ್ನೆಲೆ ಸೋಂಕಿತನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.
ಕೊರೋನಾ ಪೀಡಿತನ ಮನೆಗೆ ಹಾಲು, ಪೇಪರ್ ಹಾಕಲು ಹಾಗೂ ಮನೆ ಕೆಲಸಗಾರರು ತೆರಳದೆ, ಅಸಹಕಾರ ಮಾಡುತ್ತಿರುವುದರಿಂದ, ತೀವ್ರವಾಗಿ ನೊಂದಿರುವ ಕುಟುಂಬಸ್ಥರಾದ ಶ್ರೀನಿಧಿ ಪಾಟೀಲ ಅವರು, ಪ್ರಧಾನಿ ಕಚೇರಿ, ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ.
ಇಲ್ಲಿನ ಬಡಾವಣೆಯ ಮನೆಯೊಂದರ ವ್ಯಕ್ತಿಗೆ ಕೊರೋನಾ ದೃಢಪಟ್ಟಿದ್ದರಿಂದ, ಮನೆಯ ಮೊದಲ ಮಹಡಿಯಲ್ಲಿ ಐಸೋಲೇಟ್ ಮಾಡಲಾಗುತ್ತಿದ್ದು, ಆರೋಗ್ಯ ಇಲಾಖೆ ಮಾತ್ರೆ ಸೇರಿದಂತೆ ಔಷಧವನ್ನು ನೀಡಿದೆ. ಕುಟುಂಬದ ಇತರೆ ಆರು ಜನರು ಕೆಳ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ಆದರೆ ಸುತ್ತಮುತ್ತಲ ನಿವಾಸಿಗಳ ವರ್ತನೆ ತುಂಬಾ ಬೇಸರ ತರಿಸಿದೆ ಎಂದು ಸೋಂಕು ಪೀಡಿತ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರ ಸೂಚನೆ ಮೇರೆಗೆ, ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಹಾಗೂ ಅಧಿಕಾರಿಗಳು ಇಲ್ಲಿನ ಚಾಲುಕ್ಯ ನಗರದ ಸೋಂಕಿತನ ಮನೆಗೆ ತೆರಳಿ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಪಾಲಿಕೆ ವತಿಯಿಂದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಕುಟುಂಬದವರು ಗಾಬರಿ ಪಡುವ ಅವಶ್ಯಕತೆ ಇಲ್ಲ. ತರಕಾರಿ, ಔಷಧಿ, ಪಡಿತರ ಧಾನ್ಯ ನೀಡಲಾಗುತ್ತದೆ. ಅಲ್ಲದೆ ಸ್ಥಳೀಯರು ಕೂಡ ಸಹಾಯ, ಸಹಕಾರ ನೀಡಬೇಕು ಎಂದು ಕೋರಿದರು.