ಹೊಸ ದಿಗಂತ ವರದಿ, ವಿಜಯಪುರ:
ದಾಬಾದಲ್ಲಿ ವ್ಯಕ್ತಿಯೊಬ್ಬನಿಗೆ ಚಾಕು ಹಾಗೂ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ ಸಂತೋಷ ಪಾಂಡುರಂಗ ಬಜಬಳೆ, ಸಂದೀಪ ಭೀಮಶಿ ಯಡವೆ, ದಶರಥ ಬಪ್ಪು ಯಡವೆ ಬಂಧಿತ ಆರೋಪಿಗಳು.
ಈ 3 ಜನ ಆರೋಪಿಗಳು ಸೇರಿಕೊಂಡು, ನಗರದ ಘೇವರಚಂದ ಕಾಲೋನಿ ನಿವಾಸಿ ಮಹಾದೇವ ಕೌಲಗಿ ಎಂಬವನು, ರತ್ನಾಪುರ ಕ್ರಾಸ್ ಬಳಿಯ ತನ್ನ ದಾಬಾದಲ್ಲಿ ಊಟ ಮಾಡುತ್ತಿದ್ದ ವೇಳೆ, ಚಾಕು ಹಾಗೂ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಅನುಪಮ್ ಅಗರವಾಲ್, ಎಎಸ್ಪಿ ಡಾ.ರಾಮ ಅರಸಿದ್ದಿ ಹಾಗೂ ಡಿವೈಎಸ್ಪಿ ಕೆ.ಸಿ. ಲಕ್ಷ್ಮೀನಾರಾಯಣ ಮಾರ್ಗದರ್ಶನದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಎಸ್.ಬಿ. ಪಾಲಬಾವಿ, ಪಿಎಸ್ಐ ಎಸ್.ಕೆ. ಲಂಗೂಟಿ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದೆ.