Thursday, August 18, 2022

Latest Posts

ವಿಜಯಪುರ| ಚೀನಾ ಸೈನಿಕರ ದಾಳಿ ಖಂಡಿಸಿ ಕಾಂಗ್ರೆಸ್ ಮುಖಂಡರಿಂದ ಮನವಿ

ವಿಜಯಪುರ: ಗ್ಯಾಲ್ವಾನ್ ಗಡಿಯಲ್ಲಿ ಚೀನಾ ಸೈನಿಕರ ಅಪ್ರಚೋದಿತ ದಾಳಿಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾಜಿ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಭಾರತ-ಚೀನಾ ಅಂತಾರಾಷ್ಟ್ರೀಯ ಗ್ಯಾಲ್ವನ್ ಕಣಿವೆ ಗಡಿ ನಿಯಂತ್ರಣ ರೇಖೆಯಲ್ಲಿ ಹಲವು ದಿನಗಳಿಂದ ಚೀನಾ ಸೈನಿಕರು ಉದ್ವಿಘ್ನ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಭಾರತ-ಚೀನಾ ನಡುವೆ ಐದು ದಶಕಗಳಲ್ಲೇ ಆದ ಅತ್ಯಂತ ದೊಡ್ಡ ಸಂಘರ್ಷ ಮೊನ್ನೆ ನಡೆದಿರುವುದು ದುರಾದೃಷ್ಟಕರವಾಗಿದೆ. ಅದನ್ನು ನಿಯಂತ್ರಿಸುವಲ್ಲಿ ಭಾರತ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಚೀನಾ ದೇಶ ಭಾರತದ ಕೆಲ ಪ್ರದೇಶವನ್ನು ಆಕ್ರಮಿಸುತ್ತಿರುವುದು ವರದಿಯಾಗುತ್ತಿದ್ದು, ಆದರೂ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಹಲವು ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಹಾನಿಗೊಳಗಾದ ಕುಟುಂಬಸ್ಥರಿಗೆ ತಕ್ಷಣ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿ ಆ ಕುಟುಂಬಗಳಿಗೆ ನ್ಯಾಯ ದೊರಕಿಸಲು, ರಾಷ್ಟ್ರಪತಿಗಳು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಭಾರತದ ಸಾರ್ವಭೌಮತ್ವ ಮತ್ತು ಏಕತೆ ಕಾಪಾಡುವ ನಿಟ್ಟಿನಲ್ಲಿ ದೃಢನಿರ್ಧಾರ ಕೈಗೊಳ್ಳಬೇಕು, ಈ ವಿಷಯದಲ್ಲಿ ಹಾಗೂ ದೇಶ ಕಾಯುವ ಸೈನಿಕರ ಬೆಂಬಲಕ್ಕೆ ಕಾಂಗ್ರೆಸ್ ಸದಾ ಸಿದ್ಧವಿದೆ. ಚೀನಾ ದೇಶ ತನ್ನ ವ್ಯಾಪಾರೀಕರಣದಿಂದ ಭಾರತ ದೇಶಾದ್ಯಂತ ತನ್ನ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಚೀನಾ ದೇಶದ ವಸ್ತುಗಳನ್ನು ಬಹಿಷ್ಕರಿಸಿ ನಿಯಂತ್ರಣ ಹೇರಬೇಕು. ಸ್ವದೇಶಿ ವಸ್ತುಗಳನ್ನು ಬಳಸುವಂತಾಗಬೇಕು ಎಂದು ಹೇಳಿದರು.
ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್, ಜಿಲ್ಲಾ ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ರಾಜುಗೌಡ ಪೋಲಿಸಪಾಟೀಲ, ಮಹ್ಮದರಫೀಕ್ ಟಪಾಲ್, ಜಮೀರ್‌ಅಹ್ಮದ ಬಕ್ಷಿ, ಆರತಿ ಶಹಾಪುರ, ಜಮೀರ್‌ಅಹ್ಮದ ಬಾಗಲಕೋಟ, ಇರಫಾನ್ ಶೇಖ, ಸಾಹೇಬಗೌಡ ಬಿರಾದಾರ, ಮಹ್ಮದಹನೀಫ ಮಕಾನದಾರ, ಶಬ್ಬೀರ್ ಜಾಗೀರದಾರ, ವಸಂತ ಹೊನಮೊಡೆ, ಐ.ಎಂ. ಇಂಡಿಕರ, ಪರವೇಜ್ ಚಟ್ಟರಕಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!