ವಿಜಯಪುರ: ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಹಗಲಿರುಳು ಕಾರ್ಯನಿರ್ವಹಿಸಿದ್ದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರನ್ನು ದಿಢೀರ್ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರು, ದಶಕದ ಹಿಂದೆ 2009 ರಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಂದು ನೆರೆ ಹಾವಳಿ ಉಂಟಾದ ಸಂದರ್ಭ, ಡೋಣ ನದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಇದ್ದಿಲು ತಯಾರಿಸುವ ಕಾರ್ಮಿಕರನ್ನು ಸ್ವತಃ ನೀರಲ್ಲಿ ನುಗ್ಗಿ ಕರೆತರುವ ಮೂಲಕ ಸಾಕಷ್ಟು ಶ್ರಮಿಸಿದ್ದರು. ಅನಂತರ ಬಡ್ತಿಹೊಂದಿ ಜಿಲ್ಲಾಧಿಕಾರಿಯಾಗಿ ಬಂದ ಬಳಿಕ, ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಮರ್ಥವಾಗಿ ಶ್ರಮಿಸಿದ್ದರು. ಆದರೆ ಸದ್ಯ ಏಕಾಏಕಿ ಸರ್ಕಾರ ಇವರನ್ನು ವರ್ಗಾವಣೆ ಮಾಡಿರುವುದು ಜಿಲ್ಲೆಯ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ವೈ.ಎಸ್. ಪಾಟೀಲ್ ಅವರನ್ನು ಮೈಸೂರು ಆಡ್ಮಿನಿಸ್ಟ್ರೆಟಿವ್ ಟ್ರೇನಿಂಗ್ ಇನ್ಸಟಿಟ್ಯೂಟ್ ಜಾಯಿಂಟ್ ಡೈರೆಕ್ಟರ್ ಹುದ್ದೆಗೆ ವರ್ಗಾಯಿಸಲಾಗಿದೆ. ಜಿಲ್ಲೆಗೆ ಪಿ. ಸುನೀಲಕುಮಾರ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.