ವಿಜಯಪುರ: ಜಿಲ್ಲೆಯಲ್ಲಿ ಜೂ.18 ರಂದು ನಡೆಯಲಿರುವ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಗೆ ಜಿಲ್ಲಾಡಳಿತ ಎಲ್ಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದ್ದು, ಕೊರೋನಾ ಮುನ್ನೆಚ್ಚರಿಕೆಯಾಗಿ ಬುಧವಾರ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಜರ್ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 41 ಪರೀಕ್ಷಾ ಕೇಂದ್ರಗಳಿದ್ದು, ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಬೆಳಗ್ಗೆ 8 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಿರಲು ತಿಳಿಸಲಾಗಿದೆ. ಕಂಟೆನ್ಮೇಂಟ್ ವಲಯದಿಂದ ಬಂದಂತಹ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಗೆ ಹೊರ ರಾಜ್ಯಗಳಿಂದ 4 ವಿದ್ಯಾರ್ಥಿಗಳು (ಮುಂಬೈ ಠಾಣೆ, ಪುಣೆ, ಸೊಲ್ಲಾಪೂರ) ಪರೀಕ್ಷೆ ಬರೆಯಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 917 ಜನ ವಿದ್ಯಾರ್ಥಿಗಳು ಈ ಜಿಲ್ಲೆಯಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 23,556 ವಿದ್ಯಾರ್ಥಿಗಳು ಪರಿಕ್ಷೆ ಬರೆಯಲಿದ್ದಾರೆ. ಈಗಾಗಲೇ ಜಿಲ್ಲೆಯ ಎಲ್ಲ ಪರಿಕ್ಷಾ ಕೇಂದ್ರಗಳಿಗೆ ಸ್ಯಾನಿಟೈಜರ್ ಮಾಡಿ ಸ್ವಚ್ಛ ಗೊಳಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ, ಮುತ್ತಲು 200 ಮೀಟರ್ ಅಂತರದಲ್ಲಿ 144 ಕಲಂ ಜಾರಿ ಮಾಡಿ, ಪರೀಕ್ಷಾ ಕೇಂದ್ರದ ಸುತ್ತಮುತ್ತಲಿರುವ ಝರಾಕ್ಸ್, ಸೈಬರ್ ಕೆಫೆ, ಕೋಚಿಂಗ್ ಸೆಂಟರ್ ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಕೊರೋನಾ ವೈರಸ್ ಹರಡಿರುವ ಪ್ರಯುಕ್ತ ಪರೀಕ್ಷೆಗೆ ಬರುವ ಪ್ರತಿ ವಿದ್ಯಾರ್ಥಿಯು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ತಮಗೆ ಕುಡಿಯಲು ನೀರಿನ ಬಾಟಲ್, ಎರಡು ಪೆನ್ನುಗಳು ತೆಗೆದುಕೊಂಡು ಪ್ರತಿ ವಿದ್ಯಾರ್ಥಿಯನ್ನು ಥರ್ಮಲ್ ಸ್ಕಾö್ಯನಿಂಗ್ ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆ ಮಾಡಿ ಸಾಮಾಜಿಕ ಅಂತರ ಪಾಲಿಸುವ ಕ್ರಮ ಕೈಗೊಳ್ಳಲಾಗಿದೆ.