ವಿಜಯಪುರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 24*7 ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಇನ್ನು ಹಂತ ಹಂತವಾಗಿ ನಗರದಲ್ಲಿ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಲಭಿಸುವಂತಾಗುತ್ತದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಅತಿಕ್ರಮಣ ತೆರವುಗೊಳಿಸಿದ ಜಾಗೆಯಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಂಜೂರುಗೊಂಡ 51 ಲಕ್ಷ ರೂ.ಗಳ ಮೊತ್ತದ ಪಾರ್ಕಿಂಗ್ ಪಾತವೇ ಹಾಗೂ ಚೈನ್ಲಿಂಕ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ವಾರ್ಡ್ ನಂ. 3 ಮತ್ತು 10ರಲ್ಲಿ ಮಹಾನಗರ ಪಾಲಿಕೆಯಡಿ ಮಂಜೂರುಗೊಂಡ 8 ಲಕ್ಷ ರೂ.ಗಳ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಹಾಗೂ ವಾರ್ಡ್ ನಂ.2 ಹಾಗೂ 35ರ ವ್ಯಾಪ್ತಿಯ ಬಡಾವಣೆಗಳಿಗೆ 24*7 ನೀರು ಸರಬರಾಜು ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಗರದಲ್ಲಿ ನೀರಿನ ಅಭಾವ ತಪ್ಪಿಸುವ ನಿಟ್ಟಿನಲ್ಲಿ, ದಿನಬಳಕೆಗೆ ಹಾಗೂ ನಗರದ ಉದ್ಯಾನವನಕ್ಕೆ ಅನುಕೂಲಕ್ಕಾಗಿ ನಗರದಲ್ಲಿ ಲಭ್ಯವಿದ್ದ ಹಲವು ಬಾವಿಗಳನ್ನು ಸ್ವಚ್ಛಗೊಳಿಸಿ, ಪುನಶ್ಚೇತನಗೊಳಿಸಲಾಗುತ್ತಿದೆ. ಅಲ್ಲದೆ 260 ಕೋಟಿ ರೂ.ಗಳ ಮೊತ್ತದಲ್ಲಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಮಾಡಲಾಗುತ್ತಿದ್ದು, ವಿದ್ಯುತ್ ಕಂಬಗಳಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಿದಂತಾಗುತ್ತದೆ. 27000 ಎಲ್ಇಡಿ ವಿದ್ಯುತ್ ದೀಪಗಳು ಮಂಜೂರಾಗಿದ್ದು, ನಗರದಲ್ಲಿ ಅಳವಡಿಕೆ ಮಾಡುವ ಮೂಲಕ ವಿದ್ಯುತ್ ವ್ಯತೆಯನ್ನು ತಪ್ಪಿಸಲಾಗುತ್ತಿದೆ ಎಂದರು.
ನಗರದಲ್ಲಿ ಜಿಲ್ಲಾ ಆಡಳಿತ ಭವನ ನಿರ್ಮಾಣವಾಗಲಿದ್ದು, ಎಲ್ಲ ಕಚೇರಿಗಳು ಒಂದೆ ಕಡೆ ಕಾರ್ಯನಿರ್ವಹಿಸಲಿವೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಈ ಸಂದರ್ಭ ಸಿದ್ಧೇಶ್ವರ ಸಂಸ್ಥೆ ಚೆರಮನ್ ಬಸಯ್ಯ ಹಿರೇಮಠ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಲಕ್ಷ್ಮಣ ಜಾಧವ, ಚಂದ್ರು ಚೌಧರಿ, ಗುರು ಗಚ್ಚಿನಮಠ, ರಾಹುಲ್ ಜಾಧವ, ಉಮೇಶ ವಂದಾಲ, ರಾಜೇಶ ದೇವಗಿರಿ, ಸಂತೋಷ ಪಾಟೀಲ, ಪ್ರಕಾಶ ಚವ್ಹಾಣ, ಮಡಿವಾಳ ಯಾಳವಾರ, ಪಾಂಡುಸಾಹುಕಾರ ದೊಡಮನಿ, ಮಧು ಕಲಾದಗಿ, ಆಶೋಕ ಬೆಲ್ಲದ, ಬಸವರಾಜ ಹೇರಲಗಿ, ಕಿರಣ ಕಾಳೆ, ರಾಮು ಭಜಂತ್ರಿ, ರಾಜಶೇಖರ ಭಜಂತ್ರಿ, ಬಸವರಾಜ ಗೊಳಸಂಗಿ ಮತ್ತಿತರರು ಇದ್ದರು.