Wednesday, August 10, 2022

Latest Posts

ವಿಜಯಪುರ| ನಾಪತ್ತೆಯಾಗಿದ್ದ ಮೀನುಗಾರರ ಮೃತ ದೇಹಗಳು ಪತ್ತೆ

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕು ಸಿದ್ಧನಾಥ ಬಳಿಯ ಕೃಷ್ಣಾ ನದಿಯಲ್ಲಿ ಎರಡು ದಿನಗಳ ಹಿಂದೆ ಮೀನು ಹಿಡಿಯಲು ಹೋದ ಸಂದರ್ಭ ತೆಪ್ಪ ಮುಗುಚಿ ನದಿಪಾಲಾಗಿದ್ದ ಇಬ್ಬರು ಮೀನುಗಾರರ ಮೃತ ದೇಹಗಳು ಶನಿವಾರ ಮುಂಜಾನೆ ಕೃಷ್ಣಾ ನದಿಯ ಎರಡು ಪ್ರತ್ಯೇಕ ದಡದಲ್ಲಿ ದೊರೆತಿವೆ.

ಮೃತಪಟ್ಟವರನ್ನು ಸಿದ್ಧನಾಥ ತಾಂಡಾದ ಪರಶುರಾಮ ಲಮಾಣಿ (36), ರಮೇಶ ಲಮಾಣಿ (38) ಎಂದು ಗುರುತಿಸಲಾಗಿದೆ.

ಪರಶುರಾಮ ಲಮಾಣಿ, ರಮೇಶ ಲಮಾಣಿ ಹಾಗೂ ಅಕ್ಷಯ್ ಲಮಾಣಿ ಈ ಮೂವರು ಮೀನುಗಾರರು ಮೀನು ಹಿಡಿಯಲು ಸಿದ್ಧನಾಥ ಬಳಿಯ ಕೃಷ್ಣಾ ನದಿಯಲ್ಲಿ ಹೋದಾಗ ಮಳೆಗಾಳಿಗೆ ತೆಪ್ಪ ಮುಗುಚಿದ್ದರಿಂದ ಮೂವರ ಪೈಕಿ ಅಕ್ಷಯ್ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಪರಶುರಾಮ ಲಮಾಣಿ, ರಮೇಶ ಲಮಾಣಿ ಇಬ್ಬರು ನಾಪತ್ತೆಯಾಗಿದ್ದರು. ಸದ್ಯ ಇಬ್ಬರ ಮೃತ ದೇಹ ಪತ್ತೆಯಾಗಿವೆ.

ಕೊಲ್ಹಾರ ತಹಶೀಲ್ದಾರ್ ಎಂಎಎಸ್ ಬಾಗವಾನ ನೇತೃತ್ವದಲ್ಲಿ ಸತತ ಎರಡು ದಿನಗಳ ಕಾಲ ಶೋಧ ಕಾರ್ಯ ಕೈಗೊಳ್ಳಲಾಗಿತ್ತು.

ಮೃತಪಟ್ಟವರ ಪೈಕಿ ಪರಶುರಾಮ ಲಮಾಣಿ ಮೃತದೇಹ ಸಿದ್ದನಾಥ ತಾಂಡಾದ ಬಳಿ, ರಮೇಶ ಲಮಾಣಿ ಮೃತದೇಹ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ನದಿ ದಡದಲ್ಲಿ ಪತ್ತೆಯಾಗಿವೆ.

ಘಟನಾ ಸ್ಥಳಕ್ಕೆ ಕೊಲ್ಹಾರ ಹಾಗೂ ನಿಡಗುಂದಿ ಠಾಣೆಗಳ ಪಿಎಸ್ಐ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss