ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಜಯಪುರ| ಪಂಚಮಿ ಸಂಭ್ರಮ ಕಾಣಲಿಲ್ಲ, ಜೋಕಾಲಿ ತೂಗಲಿಲ್ಲ!

ವಿಜಯಪುರ: ಹೆಣ್ಣುಮಕ್ಕಳ ಸಂಭ್ರಮದ ಹಬ್ಬವಾದ ನಾಗರ ಪಂಚಮಿಗೆ ಜೋಕಾಲಿ ಜೀಕುವುದು ಪ್ರಮುಖ ಆಕರ್ಷಣೆ. ಆದರೆ ಮಹಾಮಾರಿ ಕೊರೋನಾ ಕರಿ ಛಾಯೆ ಆವರಿಸಿದ್ದರಿಂದ, ಜಿಲ್ಲೆಯಾದ್ಯಂತ ಜೋಕಾಲಿ ಸಂಭ್ರಮ, ಹಬ್ಬದ ಸಡಗರವಿಲ್ಲದೆ, ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಸರಳ ರೀತಿಯಲ್ಲಿ ಶನಿವಾರ ಪಂಚಮಿ ಆಚರಿಸಲಾಯಿತು.
ನಗರದ ಹಲವು ದೇವಸ್ಥಾನದಲ್ಲಿನ ನಾಗದೇವತೆಗೆ ಮಹಿಳೆಯರು, ಯುವತಿಯರು ಮುಖಕ್ಕೆ ಮಾಸ್ಕ್ ಧರಿಸಿ ಹಾಲೆರೆಯುವ ಮೂಲಕ ಪೂಜೆ ಸಲ್ಲಿಸಿ, ನಾಗರ ಪಂಚಮಿ ಆಚರಿಸಿದರು.
ಬೆಳಗ್ಗೆಯಿಂದಲೇ ಮಹಿಳೆಯರು ಹತ್ತಿರದ ದೇವಾಲಯಗಳಿಗೆ ತೆರಳಿ ನಾಗದೇವನಿಗೆ ವಿಶೇಷ ಪೂಜೆ, ಹಾಲಿನ ಅಭಿಷೇಕ ಅರ್ಪಿಸಿ, ಭಕ್ತಿ- ಭಾವ ಮೆರೆದರು.
ನಾಗರ ಪಂಚಮಿ ಹಬ್ಬ ಇನ್ನು ಒಂದು ವಾರ ಇರುವ ಮುಂಚೆಯೇ ದೊಡ್ಡ ಗಿಡಗಳಿಗೆ ಜೋಕಾಲಿ ಕಟ್ಟಿ, ಮಕ್ಕಳು, ಯುವತಿಯರು, ಮಹಿಳೆಯರು ಜೀಕಿ ಸಂಭ್ರಮಿಸುತ್ತಿದ್ದರು. ಇದರಿಂದ ನಗರ, ಪಟ್ಟಣ, ಗ್ರಾಮಗಳ ತುಂಬೆಲ್ಲ ಸಂಭ್ರಮ ಮನೆ ಮಾಡುವುದು ಪ್ರತಿ ಪಂಚಮಿಯಲ್ಲೂ ಕಂಡು ಬರುತ್ತಿತ್ತು. ಆದರೆ ಪ್ರಸ್ತುತ ನಾಗರ ಪಂಚಮಿಯ ಹಬ್ಬಕ್ಕೆ ಕೊರೋನಾ ಕಾರ್ಮೋಡ ಆವರಿಸಿದ್ದರಿಂದ, ಜೋಕಾಲಿ ಜೀಕುವುದು ಹಾಗೂ ಹಬ್ಬದ ಸಂಭ್ರಮವೂ ಕಂಡು ಬರಲಿಲ್ಲ. ಜಿಲ್ಲೆಯಾದ್ಯಂತೆ ಹಬ್ಬದ ಹುರುಪು, ಹುಮ್ಮಸ್ಸು ಕಾಣಿಸಿದೆ ಕಳೆಗುಂದಿತ್ತು.
ಹಬ್ಬದ ನಿಮಿತ್ತ ವಿವಿಧ ಬಗೆಯ ಉಂಡಿ, ಕರ್ಚಿಕಾಯಿ ಸೇರಿದಂತೆ ಸಿಹಿ ಖಾದ್ಯಗಳನ್ನು ತಯಾರಿಸಿ, ಮನೆಯಲ್ಲಿಯೇ ಕುಟುಂಬ ವರ್ಗದವರು ಹಬ್ಬವನ್ನು ಆಚರಿಸಿದರು.
ನಾಗರ ಪಂಚಮಿ ಹಬ್ಬಕ್ಕೆ ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳು ತವರು ಮನೆಗೆ ಬರುವುದು ಪದ್ಧತಿ. ಆದರೆ ಹೆಣ್ಣುಮಕ್ಕಳು ತವರು ಮನೆಗೆ ಬಂದು, ಪಂಚಮಿ ಆಚರಿಸಿ ಸಂಭ್ರಮಿಸುವ ಖಷಿಯನ್ನು ಕೊರೋನಾ ಪೀಡೆ ನುಂಗಿಬಿಟ್ಟಿದೆ ಎಂದು ಹೆಣ್ಣುಮಕ್ಕಳು ಮರಗುವಂತಾಯಿತು. ತಮ್ಮ ತವರು ಮನೆಯ ಕುಟುಂಬದವರಿಗೆ ಮೊಬೈಲ್ ಮೂಲಕ ಮಾತನಾಡಿ, ಸಮಾಧಾನ ಪಡುವಂತಾಯಿತು.
ಆದರೆ ಜಿಲ್ಲೆಯ ಕೆಲವೆಡೆ ತಮ್ಮ ತಮ್ಮ ಗ್ರಾಮಗಳಲ್ಲಿ ಯುವಕರು, ಪುರುಷರು ಹಬ್ಬದ ನಿಮಿತ್ತ ಜಿದ್ದು ಕಟ್ಟಿ, ವಿವಿಧ ಬಗೆಯ ಮನರಂಜನೆ ಆಟಗಳನ್ನಾಡಿ, ಸಂತಸಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss