ವಿಜಯಪುರ: ಈಚೆಗೆ ನಡೆದ ಜಿಪಂ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಜಿಪಂ ಸದಸ್ಯರು ದ್ರೋಹವೆಸಗಿದ್ದು, ಅವರ ವಿರುದ್ಧ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಜಿಪಂ ಸದಸ್ಯರು ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿರುವುದು ಪಕ್ಷ ವಿರೋಧಿಯಾಗಿದೆ. ಇಂತಹ ಘಟನೆಗಳು ಈ ಹಿಂದೆ ನಡೆದಾಗ ಕ್ರಮ ಕೈಗೊಳ್ಳಲಾಗಿಲ್ಲ. ಆದರೆ ಇನ್ಮೇಲೆ ಇಂತಹ ಪಕ್ಷ ದ್ರೋಹಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಬಿಜೆಪಿಯಲ್ಲಿ ಒಗ್ಗಟ್ಟಿದ್ದರೂ ತಳಮಟ್ಟದ ಕಾರ್ಯಕರ್ತರನ್ನು ಒಂದಾಗಿಸುವ ಕೆಲಸವಾಗಬೇಕಿದೆ. ಅಲ್ಲದೆ ಜಿಪಂ ಅಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭ ಲಾಠಿ ಚಾರ್ಜ್ ಮಾಡಿರುವುದು ಯಾವ ಕಾರಣಕ್ಕೆ ಎನ್ನುವ ಮಾಹಿತಿ ತಿಳಿದಿಲ್ಲ. ಈ ಕುರಿತು ಪೊಲೀಸ್ ಇಲಾಖೆಗೆ ಕೇಳಿದ್ದೇನೆ. ಮಾಹಿತಿ ತಿಳಿದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.