Monday, August 15, 2022

Latest Posts

ವಿಜಯಪುರ| ಪಟಾಕಿ ನಿಷೇಧ ಹಿಂಪಡೆಯುವಂತೆ ಶಾಸಕ ಯತ್ನಾಳ್ ಒತ್ತಾಯ

 ಹೊಸದಿಗಂತ ವರದಿ, ವಿಜಯಪುರ:

ದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧಿಸಿರುವುದನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೀಪಾವಳಿ ಸಂದರ್ಭ ಪಟಾಕಿ ನಿಷೇಧ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು. ಕೇವಲ ಹಿಂದೂಗಳ ಹಬ್ಬಕ್ಕೆ ಶಾಸ್ತ್ರ ಹೇಳಬೇಡಿ. ವರ್ಷಕ್ಕೊಮ್ಮೆ ಬರುವ ಹಿಂದೂಗಳ ಹಬ್ಬದ ಭಾವನೆಗಳಿವು. ಹಿಂದೂಗಳ ಹಬ್ಬಕ್ಕೆ ಯಾಕೆ ಈ ಮಾತು ? ಚಿತ್ರನಟ ಅಮೀರ್ ಖಾನ್ ನಾಗರ ಹಾವಿಗೆ ಯಾಕೆ ಹಾಲು ಎರೆಯುತ್ತಿರಿ ಎನ್ನುತ್ತಾರೆ. ಅಂಥವರನ್ನು ಪ್ರಶ್ನಿಸಬೇಕು ಎಂದು ಟೀಕಿಸಿದರು.
ಮಾಜಿ ಸಚಿವ ವಿನಯ ಕುಲಕರ್ಣಿ ಪರ ಪಂಚಮಸಾಲಿ ಸ್ವಾಮೀಜಿ ಮಾತನಾಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಸ್ವಾಮೀಜಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಧರ್ಮದ ಸ್ವಾಮೀಜಿಗಳು. ವಿನಯ ಕುಲಕರ್ಣಿ ವಿಷಯ ಕೋರ್ಟಿನಲ್ಲಿದೆ. ಅಲ್ಲದೆ ಸಿಬಿಐ ತನಿಖೆ ನಡೆಸುತ್ತಿದೆ. ಸಿಬಿಐ ಮೇಲೆ ನಮಗೆ ವಿಶ್ವಾಸವಿದೆ. ನಿಷ್ಪಕ್ಷಪಾತವಾಗಿ ಅವರು ತನಿಖೆ ಮಾಡುತ್ತಿದ್ದಾರೆ. ಅಲ್ಲಿ ಯಾವುದೇ ರಾಗ, ದ್ವೇಷ ಇರುವುದಿಲ್ಲ. ಅದರಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡಿಲ್ಲ, ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ. ಕೇಂದ್ರ ಸಚಿವರು ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪಗಳು ಸುಳ್ಳಿನಿಂದ ಕೂಡಿವೆ. ಸಂಪೂರ್ಣ ತನಿಖೆಯಾಗಿ ನ್ಯಾಯ ಹೊರ ಬರಲಿದೆ ಎಂದರು.
ಅಲ್ಲದೆ ದೀಪಾವಳಿ ತಮ್ಮ ಪಾಲಿಗೆ ಸಿಹಿಯಾಗುತ್ತೋ, ಕಹಿ ಯಾಗುತ್ತೊ ? ದೇವರಿಗೆ ಗೊತ್ತು ಎಂದು ಮಾರ್ಮಿಕವಾಗಿ ನುಡಿದರು.
ಸಿಎಂ ಜೊತೆ ಭಿನ್ನಾಭಿಪ್ರಾಯ ವಿಚಾರವಾಗಿ ಪ್ರತಿಕ್ರಿಯಿಸಿ, ಒಂದು ಪಕ್ಷದಲ್ಲಿ ಕೆಲವೊಂದು ಸಮಸ್ಯೆಗಳಿರುತ್ತವೆ. ನಾನು ಸಚಿವನಾಗಲು ಎಂದೂ ಬೇಡಿಕೆ ಇಟ್ಟಿಲ್ಲ, ಇಂದು ಸಚಿವ ವಿ. ಸೋಮಣ್ಣ ಮೂಲಕ ಸಿಎಂ ಸಂದೇಶ ಕಳುಹಿಸಿದ್ದಾರೆ ಎಂದರು.
ಬೆಂಗಳೂರು ಮಾದರಿಯಲ್ಲಿ ಭೀಮಾ ಪ್ರವಾಹ ಸಂತ್ರಸ್ತರಿಗೂ 25,000 ರೂ.ಗಳ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ನಾನು ವೈಯಕ್ತಿಕವಾಗಿ ಏನನ್ನೂ ಕೇಳಿಲ್ಲ. ಈ ಭಾಗದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿ ಕೊಡುವುದಾಗಿ ಹೇಳಿದ್ದಾರೆ. ನನಗೆ ಮಂತ್ರಿ ಬೇಡವೇ ಬೇಡ, ನಾನು ಸಚಿವನಾಗುವುದೇ ಇಲ್ಲ. ಕೆಲಸ ಮಾಡುವವರಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಮಂಗಳೂರು ಕಾರ್ಯಕಾರಿಣಿಯಲ್ಲಿ ಹೇಳಿದ್ದಾರೆ. ನನಗೆ ಹೆಚ್ಚಿನ ಅನುದಾನ ಸಿಗಲಿದೆ ಎಂದರು.
ಬಿ.ವೈ. ವಿಜಯೇಂದ್ರ ಉತ್ತರ ಕರ್ನಾಟಕ ನಾಯಕ ಎಂದು ಬಿಂಬಿಸುವ ಪ್ರಯತ್ನ ವಿಚಾರವಾಗಿ ಮಾತನಾಡಿ, ಯಾರು ಏನು ಬೇಕಾದರೂ ಬಿಂಬಿಸಿಕೊಳ್ಳಲಿ, ಪಕ್ಷ ನಿರ್ಣಯ ಮಾಡುತ್ತದೆ. ಜಾಹೀರಾತು ನೀಡಿ ನಮ್ಮನ್ನು ನಾವು ಹುಲಿ ಎಂದು ಬಿಂಬಿಸಿದರೆ ಜನ ಒಪ್ಪಲ್ಲ. ಜನರೇ ನಮ್ಮನ್ನು ಗುರುತಿಸುತ್ತಾರೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss