ವಿಜಯಪುರ: ನಗರದಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಶನಿವಾರ 6 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 6 ಸೋಂಕಿತರು ಮೃತಪಟ್ಟಿರುವುದು ಸೇರಿದಂತೆ ಸೋಂಕಿತರ ಸಂಖ್ಯೆ 228 ಕ್ಕೆ ಏರಿಕೆಯಾಗಿದೆ. ನಗರದ ಕಂಟೇನ್ಮೆಂಟ್ ಏರಿಯಾದ ಮೂವರಿಗೆ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ ಇಬ್ಬರು ಸೇರಿದಂತೆ ಗಂಟಲು ನೋವು, ಜ್ವರದಿಂದ ಬಳಲುತ್ತಿದ್ದ 9 ವರ್ಷದ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ.
50 ವರ್ಷದ (ಪಿ 6584), 21 ವರ್ಷದ ಯುವಕ (ಪಿ 6585), 46 ವರ್ಷದ ವ್ಯಕ್ತಿ (ಪಿ 6586), 55 ವರ್ಷದ ವ್ಯಕ್ತಿ (ಪಿ 6587), 58 ವರ್ಷದ ವ್ಯಕ್ತಿ (ಪಿ 6588) ಹಾಗೂ 9 ವರ್ಷದ ಬಾಲಕ (6589) ನಲ್ಲಿ ಸೋಂಕು ಪತ್ತೆಯಾಗಿದ್ದು, ಶನಿವಾರ 5 ಜನರು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಲ್ಲಿವರೆಗೆ 152 ಸೋಂಕಿತರು ಗುಣಮುಖರಾಗಿದ್ದು, ಇನ್ನುಳಿದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸ್ ಸಿಬ್ಬಂದಿಗೂ ಸೋಂಕು
ಇಲ್ಲಿನ ಜಲನಗರ ಪೊಲೀಸ್ ಠಾಣೆಯ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಪೊಲೀಸ್ ಠಾಣೆಯನ್ನು ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ. ನಗರದ ಗೋಳಗುಮ್ಮಟ ಕಂಟೇನ್ಮೆಂಟ್ ಏರಿಯಾದಲ್ಲಿ ಕರ್ತವ್ಯ ನಿರ್ವಹಿಸಿದ 46 ವರ್ಷದ ಪೊಲೀಸ್ ಸಿಬ್ಬಂದಿಗೂ (ಪಿ 6586) ಸೋಂಕು ದೃಢಪಟ್ಟಿದ್ದು, ಈ ಸಿಬ್ಬಂದಿಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.