Tuesday, June 28, 2022

Latest Posts

ವಿಜಯಪುರ| ಬಿಸಿಲೂರಿನಲ್ಲಿ ಥರಗುಟ್ಟುವ ಚಳಿ, ತುಂತುರು ಮಳೆ…

ಹೊಸ ದಿಗಂತ ವರದಿ ವಿಜಯಪುರ:

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಮಂಜು ಮುಸಿಕಿನ ವಾತಾವರಣದಿಂದ ತುಂತುರು ಮಳೆ ಬೀಳುತ್ತಿದ್ದು, ಚಳಿಗಾಳಿಗೆ ಜನಸಾಮಾನ್ಯರು ಥರಗುಟ್ಟುವಂತಾಗಿದೆ.

ಈ ಹಿಂದೆ ಜಿಲ್ಲೆಯಲ್ಲಿ ಸುರಿದ ಮಹಾಮಳೆ, ಭೀಮೆಯ ಪ್ರವಾಹಕ್ಕೆ ಸಿಲುಕಿ ನಲುಗಿದ ಬಿಸಿಲೂರಿನ ಮಂದಿ, ಸದ್ಯ ನಿವಾರ್ ಚಂಡಮಾರುತ ಪರಿಣಾಮದ ತುಂತುರು ಮಳೆ, ಚಳಿ ಗಾಳಿಗೆ ತಲ್ಲಣಿಸುವಂತಾಗಿದೆ.

ಕೆಲ ತಿಂಗಳ ಹಿಂದೆ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ, ರೈತರ ನೂರಾರು ಎಕರೆ ಬೆಳೆಗಳು ಹಾನಿಯಾಗಿರುವ ಜೊತೆಗೆ, ಭೀಮಾ ಪ್ರವಾಹಕ್ಕೆ ಭೀಮಾತೀರದ ಗ್ರಾಮಸ್ಥರ ಬದುಕು ಮೂರಾಬಟ್ಟೆಯಾಗಿತ್ತು. ಇಂತಹ ಸಂಕಷ್ಟದ ಮಧ್ಯೆ ಮತ್ತೆ ನಿವಾರ್ ಚಂಡಮಾರುತದ ಎಫೆಕ್ಟ್ ಜಿಲ್ಲೆಗೂ ವಕ್ಕರಿಸಿದ್ದು, ಜಿಲ್ಲೆಯ ಜನರು ಮತ್ತಷ್ಟು ಕಂಗಾಲಾಗುವಂತಾಗಿದೆ.

ಜನಜೀವನ ಅಸ್ತವ್ಯಸ್ತ:
ಕಳೆದ ರಾತ್ರಿಯಿಂದ ಬೀಳುತ್ತಿರುವ ತುಂತುರು ಮಳೆ, ಚಳಿಗಾಳಿಗೆ ಜನಜೀವನ ಅಸ್ತವ್ಯಸ್ತೆಗೊಂಡಿದ್ದು, ಬಹುತೇಕ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
ಥರಗುಟ್ಟುವ ಚಳಿಗೆ ಕಿಟಕಿ, ಬಾಗಿಲನ್ನು ಮುಚ್ಚಿಕೊಂಡು, ಬೆಚ್ಚನೆಯ ಬಟ್ಟೆ ತೊಟ್ಟು ಮನೆಯಲ್ಲಿ ಉಳಿಯುವಂತಾಗಿದೆ.

ಅನಿವಾರ್ಯ ಕಾರಣದಿಂದ ಹೊರ ಬರುವವರು ಕೊಡೆಯೊಂದಿಗೆ ಜರ್ಕಿನ್, ಜಾಕೇಟ್, ಸ್ವೇಟರ್, ಸ್ಕಾರ್ಫ್ ಸೇರಿದಂತೆ ಬೆಚ್ಚನೆಯ ಉಣ್ಣೆ ಬಟ್ಟೆ ಧರಿಸಿ ಸಂಚರಿಸುತ್ತಿದ್ದಾರೆ.

ಕೊರೋನಾ ಭೀತಿ:
ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕೊರೋನಾ ಸೋಕಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಈ ಚಳಿ, ಮಳೆಗೆ ಮತ್ತೆ ಕೊರೋನಾ ಸೋಂಕು ಹೆಚ್ಚಾಗುತ್ತದೆಯೆ ಎನ್ನುವ ಭೀತಿ ಜನರ ಮನದಲ್ಲಿ ಮೂಡುವಂತಾಗಿದೆ.
ಹೀಗಾಗಿ ಮಳೆ, ಚಳಿಗಾಳಿ, ಕೊರೋನಾ ಭೀತಿಯಿಂದಲೋ ಏನೋ ನಗರದಲ್ಲಿ ಜನ ಸಂಚಾರ ಕಡಿಮೆಯಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss