Wednesday, August 17, 2022

Latest Posts

ವಿಜಯಪುರ| ಬಿಸಿಲೂರಿನ ರಸ್ತೆ ಪಕ್ಕ ಸಾವಿರದ ಸಾಲು ಸಸಿಗಳು…!

ವಿಜಯಪುರ: ನೀರು, ನೆರಳಿಲ್ಲದ ಬಿಸಿಲೂರಿನಲ್ಲಿ ಸಾವಿರದ ಸಾಲು ಸಸಿಗಳನ್ನು ನೆಟ್ಟು, ಬಿಸಿಲು ವಾಸಿಗಳಿಗೆ ಭವಿಷ್ಯದಲ್ಲಿ ಶುದ್ಧ ಗಾಳಿ, ನೆರಳಿನಾಸರೆ ನೀಡುವ ನಿಟ್ಟಿನಲ್ಲಿ ಜಿಲ್ಲಾ ಅರಣ್ಯ ಇಲಾಖೆ ಮುಂದಾಗಿದೆ.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ತಿರುವಿನಿಂದ ಶಿವಾಜಿ ವೃತ್ತದ ವರೆಗೆ ಮೊದಲ ಹಂತವಾಗಿ, ರಸ್ತೆ ಇಕ್ಕೆಲೆಗಳಲ್ಲಿ 10-12 ಅಡಿಗೆ ಅಂತರವಾಗಿ ಸಸಿಗಳನ್ನು ನೆಡಲಾಗುತ್ತಿದ್ದು, ಎರಡನೇ ಹಂತದಲ್ಲಿ ಗೋದಾವರಿ ಹೋಟೆಲ್‌ನಿಂದ ಇಟಗಿ ಪೆಟ್ರೋಲ್ ಬಂಕ್ ವರೆಗೆ ಹಾಗೂ ಅಫ್ಜಲಪೂರ ಟಕ್ಕೆ ವರೆಗೆ ರಸ್ತೆ ಪಕ್ಕ ಒಟ್ಟು ಒಂದು ಸಾವಿರ ಸಸಿಗಳನ್ನು ನೆಡುವ ಕಾರ್ಯ ಹಮ್ಮಿಕೊಳ್ಳಲಾಗಿದೆ.

ನಗರ ಹೃದಯ ಭಾಗವಾದ ಮಹಾತ್ಮ ಗಾಂಧಿ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ದ್ವೀಪಥ ರಸ್ತೆಯ ಇಕ್ಕೆಲೆಗಳಲ್ಲಿ ಈಗಾಗಲೇ ತೆಗ್ಗು ತೋಡಿ, ಸಸಿಗಳನ್ನು ನೆಟ್ಟು, ಬೇಲಿ ಹಾಕುವ ಕಾರ್ಯ ಜೋರಾಗಿ ನಡೆದಿದೆ.

ವಿವಿಧ ಬಗೆಯ ಸಸಿ, ಭವಿಷ್ಯದ ನೆರಳಿಗೆ ಕಸಿ: ಇಲ್ಲಿನ ರಸ್ತೆ ಪಕ್ಕ ಸಪ್ತಪರಣಿ, ಪೆಟೋಡಿಯಾ, ಟೆಕೋಮಾ, ಅರಳಿ, ಬೇವು ಹೀಗೆ ವಿವಿಧ ಬಗೆಯ ಸಸಿಗಳನ್ನು ನಡೆಲಾಗುತ್ತಿದ್ದು, ಈ ಸಸಿಗಳು ನಗರಕ್ಕೆ ತುಂಬಾ ಉಪಯುಕ್ತವಾಗಿವೆ. ಕಾಡು ಮರದಂತೆ ಬೇಕಾಬಿಟ್ಟಿ ಬೆಳೆಯದೇ ಸೊಂಪಾಗಿ, ಉದ್ದವಾಗಿ ಬೆಳೆದು, ಶುದ್ಧ ಗಾಳಿ, ನೆಳರು ನೀಡುವುದರ ಜೊತೆನೆಡಲಕಂಗೊಳಿಸುವ ಮರಗಳಾಗಿವೆ.

ರಸ್ತೆ ಪಕ್ಕ ತೆಗ್ಗು ತೋಡುವುದೇ ಸವಾಲು: ಇಲ್ಲಿನ ಪ್ರಮುಖ ರಸ್ತೆಯ ಇಕ್ಕೆಲೆಗಳಲ್ಲಿ ಗಟಾರು, ಟೆಲಿಫೋನ್ ಕೇಬಲ್ ಹಾಯ್ದು ಹೋಗಿದ್ದರಿಂದ ಸಸಿ ನೆಡಲು ತೆಗ್ಗು ತೋಡಲು ಅರಣ್ಯ ಇಲಾಖೆ ಹರ ಸಾಹಸ ಪಟ್ಟಿದೆ. ಮಹಾನಗರ ಪಾಲಿಕೆ ಹಾಗೂ ಬಿಎಸ್‌ಎನ್‌ಎಲ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ, ಜೆಸಿಬಿ ಇತರೆ ಯಂತ್ರಗಳನ್ನು ಬಳಸದೆ, ಕೂಲಿ ಕಾರ್ಮಿಕರನ್ನು ಬಳಸಿಕೊಂಡು, ಗಟಾರು, ಟೆಲಿಫೋನ್ ಕೇಬಲ್‌ಗೆ ಯಾವುದೇ ರೀತಿ ಧಕ್ಕೆಯಾಗದೆ, ಗುಂಡಿಯನ್ನು ತೋಡಿಸಿ, ಸಸಿಗಳನ್ನು ನೆಡಲಾಗಿದೆ.

ಈ ಸಸಿಗಳು ಮರ‍್ನಾಲ್ಕು ವರ್ಷಗಳಲ್ಲಿ ಮರಗಳಾಗಿ ಬೆಳೆಯುತ್ತವೆ. ಈ ಅವಧಿಯಲ್ಲಿ ಸಸಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಜೊತೆ ಮಹಾನಗರ ಪಾಲಿಕೆ ಕೈ ಜೋಡಿಸುವ ಭರವಸೆ ನೀಡಿದ್ದು, ಸಾರ್ವಜನಿಕರು ಕೂಡ ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಕೋರುತ್ತಾರೆ.

ಜಿಲ್ಲೆಯಾದ್ಯಂತ 500 ಹೆಕ್ಟೇರ್ ಪ್ರದೇಶದಲ್ಲಿ 1.50 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದ್ದು, ಭವಿಷ್ಯದಲ್ಲಿ ಬರದ ಜಿಲ್ಲೆ ಹಸರೀಕರಣ ಮಾಡುವ ನಿಟ್ಟಿನಲ್ಲಿ ಒತ್ತು ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ 1.50 ಲಕ್ಷ ಗಿಡ, ಮರಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ. ಅಲ್ಲದೆ ನಗರದ ಪ್ರಮುಖ ರಸ್ತೆಯ ಇಕ್ಕೆಲೆಗಳಲ್ಲಿ ಸಸಿ ನೆಡುವ ಕಾರ್ಯ ಸವಾಲಾಗೇ ಸ್ವೀಕರಿಸಲಾಗಿದ್ದು, ಗಟಾರು, ಬಿಎಸ್‌ಎನ್‌ಎಲ್ ಕೇಬಲ್‌ಗೆ ಧಕ್ಕೆಯಾಗದಂತೆ ಸಸಿಗಳನ್ನು ನೆಡಲಾಗುತ್ತಿದೆ.
– ಸರೀನಾ ಚಿಕ್ಕಲಗಾರ ಜಿಲ್ಲಾ ಅರಣ್ಯ ಅಧಿಕಾರಿ, ವಿಜಯಪುರ

ನೀರು, ನೆರಳಿಲ್ಲದ ಜಿಲ್ಲೆಯಲ್ಲಿ ಸಸಿ ನೆಡೆಲು ಮುಂದಾಗಿರುವುದು ಒಳ್ಳೆಯಕಾರ್ಯ. ಇದರಿಂದ ಭವಿಷ್ಯದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುವುದರಲ್ಲಿ ಸಂದೇಹವೇನಿಲ್ಲ. ಗಿಡ, ಮರಗಳನ್ನು ಮಗುವಿನಂತೆ ಪ್ರೀತಿಸುವ ಕಕ್ಕುಲಾತಿ, ನಮ್ಮ ಜನರಿಗೆ ಬರಬೇಕು.
– ಅಂಬಾದಾಸ ಜೋಶಿ ಅಧ್ಯಕ್ಷರು ಪರಿಸರ ಜಾಗೃತಿ ವೇದಿಕೆ, ವಿಜಯಪುರ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!