Thursday, July 7, 2022

Latest Posts

ವಿಜಯಪುರ| ಭೀಮಾ, ಕೃಷ್ಣಾ ನದಿ ಅಕ್ರಮ ಮರಳು ಗಣಿಗಾರಿಕೆ ನಿಗಾಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚನೆ

ವಿಜಯಪುರ: ಜಿಲ್ಲೆಯ ಭೀಮಾ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸುವ ಜೊತೆಗೆ ಅಕ್ರಮವಾಗಿ ಸಾಗಾಣಿಕೆ ಬಗ್ಗೆಯೂ ತೀವ್ರ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ವಿಡಿಯೋ ಸಂವಾದ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಮಟ್ಟದ ಕಂದಾಯ, ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ತಾಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿರುವ ತಾಲೂಕು ಕಾರ್ಯಪಡೆ ಸಮಿತಿ ಇನ್ನೂ ಚುರುಕಾಗಿ ಕಾರ್ಯನಿರ್ವಹಿಸುವ ಮೂಲಕ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಭೀಮಾ ನದಿ ತೀರ ವಿಶೇಷವಾಗಿ ಇಂಡಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗಾಗಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ವಿಶೇಷವಾದ ಇಬ್ಬರು ಅಧಿಕಾರಿಗಳನ್ನು 24X7 ಕಾಲ ನಿಯೋಜಿಸಿ, ಭೀಮಾ ನದಿ ನೀರು ಬರುವವರೆಗೆ ತೀವ್ರ ನಿಗಾ ಇಡಲು ಉದ್ದೇಶಿಸಲಾಗಿದೆ. ಅದರಂತೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ತಾಲೂಕು ಟಾಸ್ಕ್ಫೋರ್ಸ್ ಸಮಿತಿ ಇದ್ದು, ಪೊಲೀಸ್ ಉಪ ಅಧೀಕ್ಷಕರು, ತಹಶೀಲ್ದಾರ, ಲೋಕೋಪಯೋಗಿ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಚುರುಕಾಗಿ ಕಾರ್ಯನಿರ್ವಹಿಸಬೇಕು. ಅಕ್ರಮ ಮರಳು ಗಣಿಗಾರಿಕೆ ಕುರಿತು ಬರುವ ದೂರುಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸುವಂತೆ ತಿಳಿಸಿ, ಅವಶ್ಯಕ ಸಂದರ್ಭ ಪೊಲೀಸ್ ಇಲಾಖೆ ನೆರವು ಪಡೆಯಲು ತಿಳಿಸಿದರು.
ಅದರಂತೆ ಇಂಡಿ, ಮೊರಟಗಿ ಚೆಕ್‌ಪೋಸ್ಟ್ ವ್ಯಾಪ್ತಿಯಲ್ಲಿ ತೀವ್ರ ನಿಗಾ ಇಡಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರನ್ನು ತಾಲೂಕು ಟಾಸ್ಕ್ಫೋರ್ಸ್ ಸಮಿತಿ ಅಡಿಯಲ್ಲಿ ನೇಮಿಸಬೇಕು. ದೂರುಗಳು ಬಂದ ತಕ್ಷಣ ವಿಳಂಬವಿಲ್ಲದೆ ತಕ್ಷಣ ಕ್ರಮ ಕೈಗೊಳ್ಳಬೇಕು, ತಾಳಿಕೋಟೆಯಲ್ಲಿ ತಹಶೀಲ್ದಾರರು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ಅಕ್ರಮ ಗಣಿಗಾರಿಕೆ ತಡೆಗೆ ತಾಲೂಕಾವಾರು ಸಹಾಯವಾಣಿ ಮತ್ತು ವಿಚಕ್ಷಣಾ ತಂಡಗಳ ರಚನೆ ಮತ್ತು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸುವ ಕುರಿತಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಪಂ ಸಿಇಒ ಗೋವಿಂದ ರೆಡ್ಡಿ, ಗಣಿ ಮತ್ತು ಭೂವಿಜ್ಞಾನ, ಪೊಲೀಸ್, ಲೋಕೋಪಯೋಗಿ, ಕಂದಾಯ ಅಧಿಕಾರಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss