ವಿಜಯಪುರ: ಫಿನಾಯಿಲ್ ಮಾರಾಟ ಮಾಡುವ ನೆಪದಲ್ಲಿ ಮನೆಗೆ ಬಂದ ಕಳ್ಳರ ತಂಡ, ಮತ್ತು ಬರುವ ಔಷಧ ಸಿಂಪಡಿಸಿ ಲಕ್ಷಾಂತರ ರೂ.ಗಳ ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ಇಲ್ಲಿನ ಶಾಂತಿ ನಗರದಲ್ಲಿ ನಡೆದಿದೆ.
ಇಲ್ಲಿನ ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಅವರ ಮನೆಗೆ ಭಾನುವಾರ ಯುವತಿಯೊಬ್ಬಳು ಫಿನಾಯಿಲ್ ಮಾರಲು ಬಂದಿದ್ದಾಳೆ. ಫಿನಾಯಿಲ್ ಮಾರಾಟದ ಧ್ವನಿ ಕೇಳಿ, ಯುವಕ ಮನೆಯಿಂದ ಹೊರಗೆ ಬಂದಾಗ, ಆತನಿಗೆ ಮತ್ತು ಬರೋ ವಾಸನೆ ತೋರಿಸಿ ಪ್ರಜ್ಞೆ ತಪ್ಪಿಸಿದ್ದಾಳೆ. ಅನಂತರ ಮನೆಯೊಳಗೆ ನುಗ್ಗಿದ ಯುವತಿ, ಮನೆಯಲ್ಲಿ ಆಗಷ್ಟೇ ಮಧ್ಯಾಹ್ನ ಊಟ ಮಾಡಿ ಮಲಗಿದ್ದ ಸುನಂದಾ ತೋಳಬಂದಿ ಹಾಗೂ ಅವರ ಪತಿ ವಾಸುದೇವ ತೋಳಬಂದಿಯವರಿಗೆ ಮತ್ತು ಬರಿಸೋ ಔಷಧ ಸಿಂಪಡಿಸಿ, ಪ್ರಜ್ಞೆ ತಪ್ಪಿಸಿದ್ದಾಳೆ. ಬಳಿಕ ಮನೆಯ ತಿಜೋರಿಯಲ್ಲಿನ 2.20 ಲಕ್ಷ ರೂ.ಗಳ ಮೌಲ್ಯದ 40 ಗ್ರಾಂ ಚಿನ್ನಾಭರಣ, 220 ಗ್ರಾಂ ಬೆಳ್ಳಿಯ ಆಭರಣ ಹಾಗೂ 2 ಮೊಬೈಲ್ನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾಳೆ.
ಅಲ್ಲದೆ ಸುನಂದಾ ತೋಳಬಂದಿ ಅವರ ಮನೆಯ ನಾಯಿಗೂ ವಿಷ ಉಣಿಸಿ ಸಾಯಿಸಲಾಗಿದೆ.
ಈ ಸಂಬಂಧ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳರು ಬೀಡು ಬಿಟ್ಟಿರುವ ಶಂಕೆ
ಜಿಲ್ಲೆಯಲ್ಲಿ ಇಂತಹ ಕಳ್ಳತರ ತಂಡವೊಂದು ಬೀಡು ಬಿಟ್ಟಿರುವ ಕುರಿತು ಶಂಕೆ ವ್ಯಕ್ತವಾಗಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಈ ಕಳ್ಳರ ಗುಂಪು ಇರಬಹುದು ಎನ್ನಲಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಮೂಲಕ ಪ್ರಕಟಣೆ ಹೊರಡಿಸಿ, ಸಾರ್ವಜನಿಕರು ಜಾಗೃತಿ ಹಾಗೂ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.