ವಿಜಯಪುರ: ನಗರ ಹೊರ ವಲಯ ತೊರಳಿ ಬಳಿಯ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಅವರ ಅಧಿಕಾರಾವಧಿ ಮುಗಿದ ಹಿನ್ನೆಲೆ, ನೂತನ ಕುಲಪತಿ ಪ್ರೊ. ಓಂಕಾರ ಕಾಕಡೆ ಅವರಿಗೆ ಶುಕ್ರವಾರ ಸಂಜೆ ಅಧಿಕಾರ ಹಸ್ತಾಂತರ ಮಾಡಿದರು.
ಕಳೆದ ನಾಲ್ಕು ವರ್ಷಗಳಿಂದ ಕುಲಪತಿಗಳಾಗಿ ಸೇವೆಸಲ್ಲಿಸಿದ ಪ್ರೊ. ಸಬಿಹಾ ಭೂಮಿಗೌಡ ಅವರು ಜೂ.19 ರಂದು ನಿವೃತ್ತಗೊಂಡಿದ್ದರಿಂದ, ಮಹಿಳಾ ವಿವಿಯ ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಓಂಕಾರ ಕಾಕಡೆ ಅವರನ್ನು ರಾಜ್ಯಪಾಲರು ಹಾಗೂ ವಿವಿಯ ಕುಲಾಧಿಪತಿಯೂ ಆಗಿರುವ ವಜುಬಾಯಿ ವಾಲಾ ಅವರು, ಜೂ.20 ರಿಂದ ಡಿಸೆಂಬರ್ 13, ರ ವರೆಗೆ ಅಥವಾ ನೂತನ ಕುಲಪತಿಗಳ ನೇಮಕ ಆಗುವವರೆಗೂ ನೇಮಕ ಮಾಡಿ ಆದೇಶ ಹೊರಡಿಸಿದ ಹಿನ್ನೆಲೆ, ಇಂದು ಅಧಿಕಾರ ಸ್ವೀಕರಿಸಿದರು.
ಇದೇ ಸಂದರ್ಭ ಸೇವೆಯಿಂದ ನಿವೃತ್ತರಾದ ಪ್ರೊ.ಸಬಿಹಾ ಭೂಮಿಗೌಡ ಅವರನ್ನು ವಿಶ್ವವಿದ್ಯಾನಿಲಯದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಪ್ರೊ.ಸಬಿಹಾ ಅವರು ತಮ್ಮ ಮಾತೃ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠಕ್ಕೆ ಮರಳಲಿದ್ದಾರೆ.
ಈ ಸಂದರ್ಭ ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ. ತಡಸದ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ ಮತ್ತಿತರರು ಇದ್ದರು.