ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ಓರ್ವ ಮಹಿಳೆಗೆ ಸೇರಿದಂತೆ ನಾಲ್ಕು ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಐದು ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 127ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ನಗರದಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಗರದ ಕಂಟೇನ್ಮೆಂಟ್ ಝೋನ್ ಪ್ರದೇಶದ ಒಬ್ಬರಿಗೆ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ ಮೂವರಿಗೆ ಸೇರಿದಂತೆ ಇಂದು ನಾಲ್ಕು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರೋಗಿ ಸಂಖ್ಯೆ 3662ರ 24 ವರ್ಷದ ಯುವಕ, ರೋಗಿ ಸಂಖ್ಯೆ 3663ರ 19 ವರ್ಷದ ಯುವಕ, ರೋಗಿ ಸಂಖ್ಯೆ 3792ರ 55 ವರ್ಷದ ವ್ಯಕ್ತಿ ಹಾಗೂ ರೋಗಿ ಸಂಖ್ಯೆ 3793ರ 32 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಈಗಾಗಲೇ ಸೋಂಕಿನಿಂದ ಬಳಲುತ್ತಿದ್ದ 58 ಜನರು ಗುಣಮುಖಗೊಂಡಿದ್ದು, ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನುಳಿದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.